ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಕ್ಲಸ್ಟರ್ ಮಟ್ಟದ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕ್ಲಸ್ಟರ್ ವ್ಯಾಪ್ತಿಯ ಜೆಎಸ್‌ಎಸ್ ಶಾಲೆಗಳಾದ ಹಳ್ಳಿಕೆರೆಹುಂಡಿ, ಹುಲ್ಲಹಳ್ಳಿ, ಮಹದೇವನಗರ, ನಂಜನಗೂಡು ಬಾಲಕಿಯರ ಪ್ರೌಢಶಾಲೆಗಳ ಶಾಲಾ ಹಂತದಲ್ಲಿ ಭೂಮಿ ಮತ್ತು ಬಾಹ್ಯಾಕಾಶ, ಸಮಾಜ ವಿಜ್ಞಾನ, ಜೀವಶಾಸ್ತ್ರ, ಕೃಷಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಕ್ರೀಡೆ ಮತ್ತು ಭಾಷೆಗಳಿಂದ ಆಯ್ದ ಒಟ್ಟು 130, ಹಿರಿಯ ಪ್ರಾಥಮಿಕ ಶಾಲೆಯ 47 ಮಾದರಿಗಳು (ಮಾಡೆಲ್) ಪ್ರದರ್ಶನಗೊಂಡವು. ಇದರಲ್ಲಿ ಜನರಿಗೆ ಉತ್ತಮ ವಿಷಯ ಜ್ಞಾನವನ್ನು ತಿಳಿಸಿಕೊಡುವ ಆಕರ್ಷಕವಾದ 67 ಮಾದರಿಗಳು 2025 ರ ಜನವರಿಯಲ್ಲಿ ನಡೆಯುವ ಸುತ್ತೂರು ಜಾತ್ರೆಯ ಶೈಕ್ಷಣಿಕ ಮತ್ತು ವಿಜ್ಞಾನ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿವೆ.
ತೀರ್ಪುಗಾರರಾಗಿ ಶಿವಮಾದಪ್ಪ, ನಟರಾಜು, ಡಾ. ಮಹದೇವಪ್ರಸಾದ, ಶಿವಪ್ರಸಾದ, ಅರ್ಜುನ, ಬಿಳಿಗಿರಿ, ಮಹದೇವಸ್ವಾಮಿ, ನಾಗರಾಜಾಚಾರ್, ರಾಜಪ್ಪ ಆಗಮಿಸಿದ್ದರು. ವಿಷಯ ಪರಿವೀಕ್ಷಕರಾದ ಎಸ್.ಸಿ. ಚನ್ನಬಸಪ್ಪ, ನಾಗರಾಜು, ರೇಣುಕಸ್ವಾಮಿ, ಸಂಯೋಜನಾಧಿಕಾರಿಗಳಾದ ತ್ರಿಪುರಾಂತಕ, ಮುಖ್ಯ ಶಿಕ್ಷಕ ಜಿ. ಶಿವಮಲ್ಲು, ಮುಖಂಡರಾದ ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ ಇದ್ದರು.