ವಿಜಯವಾಣಿ ವಿಶೇಷ ಕನಕಗಿರಿ
ಗುಡ್ಡಗಾಡಿನ ಈ ಗ್ರಾಮಕ್ಕೆ ಈಗಲೂ ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಸೌಲಭ್ಯಗಳಂತೂ ಮರೀಚಿಕೆ. ಇಂಥ ಕುಗ್ರಾಮದಲ್ಲಿ ಇಡೀ ವೃತ್ತಿ ಜೀವನ ಮುಗಿಸಿದ ಶಿಕ್ಷಕರೊಬ್ಬರು ಜು.31ರಂದು ನಿವೃತ್ತಿ ಮೂಲಕ ಮಾದರಿಯಾಗಿದ್ದಾರೆ. ತಾಲೂಕಿನ ಕೊನೆಯ ಊರಾದ ಕುಗ್ರಾಮ ಬೊಮ್ಮಸಾಗರ ತಾಂಡಾದಲ್ಲಿ ಸುದೀರ್ಘ 25 ವರ್ಷ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ಕೆಲಸ ಮಾಡಿದ ಶರಣಪ್ಪ ಕೋಳೂರು ಅವರ ಕಥೆಯಿದು.
ಯಲಬುರ್ಗಾ ತಾಲೂಕಿನ ಸಂಗನಾಳದ ಇವರು 1988ರಲ್ಲಿ ಐಟಿಸಿ ಮುಗಿಸಿದ್ದಾರೆ. ಸರ್ಕಾರಿ ನೌಕರಿ ದೊರೆಯದಿದ್ದಕ್ಕೆ ಒಕ್ಕಲುತನದಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ 35ನೇ ವಯಸ್ಸಿಗೆ, ಅಂದರೆ 1998ರಲ್ಲಿ ಶಿಕ್ಷಕ ವೃತ್ತಿ ದೊರೆತಿದೆ. ಆಗ ಬೊಮ್ಮಸಾಗರ ತಾಂಡಾ ಆಯ್ಕೆ ಮಾಡಿಕೊಂಡಿದ್ದರು. ಮೊದಲ ದಿನ ಹಂಪಸದುರ್ಗಕ್ಕೆ ಬಸ್ಸಿನಲ್ಲಿ ಬಂದು, ಅಲ್ಲಿಂದ ಕಾಲ್ನಡಿಗೆಯಲ್ಲೇ ತಾಂಡಾ ಶಾಲೆಗೆ ತೆರಳಿ ಹುದ್ದೆಗೆ ಸೇರಿದ್ದರು.
ಬಸ್ ವ್ಯವಸ್ಥೆಯಿಲ್ಲದ್ದರಿಂದ ಮೊದಲ ದಿನದಿಂದಲೇ ಶಾಲೆಯಲ್ಲಿ 10 ದಿನ ವಾಸ್ತವ್ಯ ಹೂಡಿದ್ದರು. ನಂತರ ಸಾಮಗ್ರಿಗಳೊಂದಿಗೆ ಬಂದು ತಾಂಡಾದಲ್ಲೇ ಸುಮಾರು 3 ವರ್ಷ ತಂಗಿ, ಪಾಠ ಮಾಡಿದ್ದಾರೆ. ಬಳಿಕ ಪತ್ನಿ-ಮಕ್ಕಳೊಂದಿಗೆ ಪಕ್ಕದ ಮುಸಲಾಪುರದಲ್ಲಿ ವಾಸವಾದರು.
ಮೊದಲಿಗೆ ಸೈಕಲ್, ಬಳಿಕ ಬೈಕ್ ಮೂಲಕ ಶಾಲೆಗೆ ತೆರಳಿ ಕೆಲಸ ನಿರ್ವಹಿಸಿದ್ದಾರೆ. ಸೇವೆಗೆ ಸೇರಿದಾಗಿನಿಂದ ಒಂಬತ್ತು ವರ್ಷ ಏಕೋಪಾಧ್ಯಾಯರಾಗಿದ್ದರು. ಇತ್ತೀಚೆಗೆ ತಾಂಡಾ ರಸ್ತೆ ಕಂಡಿದ್ದರೂ ಬಸ್ ಸೌಲಭ್ಯ ಅಷ್ಟಕ್ಕಷ್ಟೇ. ಕಿರಿಯ ಪ್ರಾಥಮಿಕ ಶಾಲೆಯಿದ್ದಾಗ ಒಂದೇ ಕೊಠಡಿಯಿತ್ತು. 2013-14ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.
ಶಾಲೆ ಉನ್ನತೀಕರಣದಲ್ಲಿ ಕೋಳೂರು ಪಾತ್ರ-ಶ್ರಮ ದೊಡ್ಡದು. ಇದೀಗ ಶಾಲೆಯಲ್ಲಿ ಆರು ಶಿಕ್ಷಕರಿದ್ದು, 8 ಕೊಠಡಿಗಳಿವೆ. ಸೌಮ್ಯ ಸ್ವಭಾವದ ಶರಣಪ್ಪ ಕೋಳೂರು ಎಲ್ಲರೊಂದಿಗೂ ಹೊಂದಿಕೊಂಡು ನೆಚ್ಚಿನ ಶಿಕ್ಷಕರಾಗಿದ್ದರು. 2008ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಊರು, ಇಲ್ಲವೇ ಆಸುಪಾಸಿನಲ್ಲಿ, ಅಥವಾ ನಗರ ಪ್ರದೇಶಗಳಲ್ಲಿ ನೌಕರಿ ಇರಬೇಕೆಂದು ಬಯಸುವ ಈಗಿನ ವಾತಾವರಣದಲ್ಲಿ ಕೋಳೂರು ಭಿನ್ನವಾಗಿ ಕಾಣುತ್ತಾರೆ.
ಶರಣಪ್ಪರಂಥ ಶಿಕ್ಷಕರು ಇನ್ನೂ 10 ವರ್ಷ ಸೇವೆ ಸಲ್ಲಿಸಿದರೂ ನಮಗೆ ಬೇಸರವಾಗುತ್ತಿರಲಿಲ್ಲ. ಎಲ್ಲರೊಂದಿಗೆ ಉತ್ತಮ ಒಡನಾಟವಿರುವ ಶಿಕ್ಷಕರು ಸಿಕ್ಕಿದ್ದೇ ನಮ್ಮ ಪುಣ್ಯ.ಯಮನೂರಪ್ಪ ಭೋವಿ, ಎಸ್ಡಿಎಂಸಿ ಅಧ್ಯಕ್ಷ, ಬೊಮ್ಮಸಾಗರ ತಾಂಡಾ
ನನಗೆ ಗೊತ್ತಿಲ್ಲದೆ ಈ ಶಾಲೆ ಆಯ್ಕೆ ಮಾಡಿಕೊಂಡಿದ್ದೆ. ಆದರೆ, ಇಷ್ಟೊಂದು ಕುಗ್ರಾಮವೆಂದು ಗೊತ್ತಿರಲಿಲ್ಲ. ಗ್ರಾಮದವರೊಂದಿಗೆ ಹೊಂದಿಕೊಂಡಿದ್ದರಿಂದ ಮತ್ತು ಅವರ ಸಹಕಾರದಿಂದ ಅಲ್ಲಿಯೇ ನನ್ನ ವೃತ್ತಿ ಜೀವನ ಮುಗಿಸಿದ್ದು ಸಂತೋಷವಿದೆ.ಶರಣಪ್ಪ ಕೋಳೂರು ನಿವೃತ್ತ ಶಿಕ್ಷಕ