ಹುಬ್ಬಳ್ಳಿ: ರಾಮ ಹಾಗೂ ಶಿವ ಪರಮಾತ್ಮರು ಸಾಮರಸ್ಯದ ಸಂಕೇತವಾಗಿದ್ದಾರೆ, ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಯಾರೆಲ್ಲ ಪ್ರಾರ್ಥನೆ ಮಾಡುತ್ತಾರೆಯೋ ಅವರೆಲ್ಲ ರಾಮನನ್ನು ಭಕ್ತಿಯಿಂದ ಕಾಣುತ್ತಾರೆ, ಮರ್ಯಾದಾ ಪುರುಷೋತ್ತಮನು ಭಾರತದ ಏಕತೆಯ ಪ್ರತಿಕವಾಗಿದ್ದಾರೆ ಎಂದು ನಿರಾಮಯ ಫೌಂಡೇಷನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅಭಿಪ್ರಾಯಪಟ್ಟರು.
ಇಲ್ಲಿಯ ನೃಪತುಂಗ ಬೆಟ್ಟದಲ್ಲಿರುವ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾದರಿ ರಾಮ ಮಂದಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಕ್ತ ಒಂದು ಹೆಜ್ಜೆ ದೇವರ ಕಡೆ ಇಟ್ಟರೆ, ಭಗವಂತ ಸಾವಿರ ಹೆಜ್ಜೆಗಳನ್ನು ಭಕ್ತನ ಕಡೆ ಇಡುತ್ತ ಧಾವಿಸಿ ಬರುತ್ತಾನೆ. ಹಾಗಾಗಿ ದೇವರಲ್ಲಿ ಪವಿತ್ರ ಭಕ್ತಿ ಬೇಕು. ರಾಮನಾಮ ಎಂಬುದು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಲ್ಲ, ಆತ ಎಲ್ಲರಿಗೂ ಸೇರಿದ ದೇವರು, ಎಲ್ಲರೊಳಗೂ ಇದ್ದಾನೆ ಎಂದು ಹೇಳಿದರು.
ಸಮಾಜದಲ್ಲಿ ಎಲ್ಲ ವರ್ಗದ ಜನರು ತಮ್ಮ ಮಕ್ಕಳಿಗೆ ರಾಮನ ಹೆಸರು ಇಡುತ್ತಾರೆ. ಅಂದರೆ ಅಂತಹ ಆದರ್ಶ ಜೀವನ ನಡೆಸಿದಾತ ರಾಮ. ಮಾತಾ& ಪಿತೃ ವಾಕ್ಯ ಪರಿಪಾಲಕ, ಸಹೋದರ ಪ್ರೇಮ, ರಾಜ್ಯಾಡಳಿತ ಎಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾನೆ. ಹಾಗಾಗಿ ನಮಗೆ ರಾಮ ಆದರ್ಶಪ್ರಾಯ ಎಂದರು.
ಸಾನ್ನಿಧ್ಯ ವಹಿಸಿದ್ದ ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಅತಿಥಿಯಾಗಿದ್ದ ಕನಕದಾಸ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಪಿರಾಮಿಡ್ ಧ್ಯಾನ ಮಂದಿರದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಉದ್ಘಾಟನೆಯಾಗಿ ವರ್ಷವಾಗುತ್ತಿರುವ ಸಂದರ್ಭದಲ್ಲಿ ಅದೇ ಮಾದರಿಯ ಮಂದಿರವನ್ನು ಎಲ್ಲ ಭಕ್ತರಿಗೆ ದರ್ಶನ ಮಾಡಿಸಲು ತುಮಕೂರಿನ ವಿನಯ್ ರಾಮ್ ಅವರು ಬಂದಿದ್ದಾರೆ. ಅವರು ಶಿಕ್ಷಕ ವೃತ್ತಿ ತೊರೆದು ರಾಮಮಂದಿರದ ಮಾದರಿ ನಿಮಿರ್ಸಿ ಈಗಾಗಲೇ 76ಕಡೆ ಪ್ರದರ್ಶನ ಮಾಡಿದ್ದಾರೆ. ಇದೀಗ ಹುಬ್ಬಳ್ಳಿ ಜನರಿಗೆ ನೋಡುವ ಅವಕಾಶ ಒದಗಿ ಬಂದಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
ಮಾದರಿ ರಾಮ ಮಂದಿರ ನಿರ್ಮಾತೃ ತುಮಕೂರಿನ ವಿನಯ್ ರಾಮ್ ಮಾತನಾಡಿ, ಅಯೋಧ್ಯೆಯಲ್ಲಿರುವ ರಾಮ ಮಂದಿರದ ಪ್ರತಿರೂಪದಂತೆ ಇದನ್ನು ನಿರ್ಮಿಸಲಾಗಿದೆ. ಸಂಪೂರ್ಣ ರಾಮಾಯಣದ ಚಿತ್ರಣವನ್ನು ಮಂದಿರದಲ್ಲಿ ನಿರ್ಮಿಸಿರುವುದು ವಿಶೇಷ ಎಂದರು.
ಪಿರಾಮಿಡ್ ಧ್ಯಾನ ಮಂದಿರದ ಟ್ರಸ್ಟಿಗಳಾದ ಸುರೇಶ, ಲಲಿತ್ ಶಾ, ಶ್ರೀನಿವಾಸ, ಬಸವರಾಜ ಹೊಸಮನಿ, ವಿಶಾಲಾ ಆಕಳವಾಡಿ, ನೀಲಕಂಠ ಆಕಳವಾಡಿ, ವಿಜಯ ಶೆಟ್ಟರ್, ಇತರರು ಇದ್ದರು.
ಹುಣ್ಣಿಮೆ ಪ್ರಯುಕ್ತ ಧ್ಯಾನ ಮಂದಿರದಲ್ಲಿ ಉಚಿತ ಸಾಮೂಹಿಕ ಧ್ಯಾನ ನಡೆಯಿತು. ಸತ್ಸಂಗ ಮತ್ತು ಸಾಂಸತಿಕ ಕಾರ್ಯಕ್ರಮಗಳು ನಡೆದವು. ಆವರಣದಲ್ಲಿ ದೀಪೋತ್ಸವ ನೆರವೇರಿಸಲಾಯಿತು.