ವಿಜಯವಾಣಿ ಸುದ್ದಿಜಾಲ ಬೈಂದೂರು
ಜನರ ಅವಶ್ಯಕತೆಗೆ ಪೂರಕವಾಗಿ ತನ್ನ ಪ್ರಾಮಾಣಿಕ ಸೇವೆ ಮಾಡುತ್ತಿರುವ ಮುದೂರು ವ್ಯವಸಾಯ ಸೇವಾ ಸಹಕಾರಿ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದು ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ ಹೇಳಿದರು.
ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ವಿಜಯಶಾಸ್ತ್ರಿ ಅಧ್ಯಕ್ಷತೆ ವಹಿಸಿ, ಸಂಘ ಈ ಸಾಲಿನಲ್ಲಿ 231.60 ಕೋಟಿ ರೂ. ವ್ಯವಹಾರ ನಡೆಸಿದ್ದು, 1.07 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.13 ಡೆವಿಡೆಂಡ್ ನೀಡಲಾಗುವುದು. ಸಂಘದ ವತಿಯಿಂದ ಸಿಎನ್‌ಜಿ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಳ ಖರೀದಿ ಮಾಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಸರ್ಕಾರ ಕಸ್ತೂರಿರಂಗನ್ ವರದಿ ಜಾರಿಗೊಳಿಸಿ ವಾಣಿಜ್ಯ ಹಾಗೂ ಕೈಗಾರಿಕೆ ಮತ್ತು ಭೂಪರಿವರ್ತನೆ ಮಾಡುವುದನ್ನು ಈಗಾಗಲೇ ನಿಲ್ಲಿಸಿದೆ. ರೈತರಿಗೆ ಯಾವುದೇ ವಿಚಾರ ತಿಳಿಸದೆ ರೈತರ ಮೂಲ ಪಟ್ಟಾ ಭೂಮಿಯನ್ನು ಅತಿಸೂಕ್ಷ್ಮ ಪ್ರದೇಶವೆಂದು ಘೋಷಿಸಿದ ವಿಚಾರ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಜತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಹಕಾರಿ ಮೂಲಕ ಗ್ರಾಮಸ್ಥರ ಮನವಿಯನ್ನು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟವರಿಗೆ ಸಲ್ಲಿಸುವುದೆಂದು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಸಂಘ ನಿರ್ದೇಶಕರಾದ ಸಂತೋಷ್, ನಿಶಾದ್, ಚಂದ್ರಶೇಖರ್, ಅಬ್ದುಲ್ ಆಸಿಸ್, ರಾಘವೇಂದ್ರ ಡಿ, ಸಿ.ಕೆ ವಿಜಿ, ಸುಶೀಲಾ, ಸುವರ್ಣ ಕುಮಾರ್, ಬೆನ್ನಿ, ಜಯಂತ್, ಬಸವ ನಾಯ್ಕ, ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ನಕ್ಷತ್ರ ಬೋವಿ ವಂದಿಸಿದರು. ಮಂಜುನಾಥ ಬಿ.ಎಲ್ ನಿರೂಪಿಸಿದರು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ರಾಜ್ಯಮಟ್ಟದ ಕ್ರೀಡಾ ಪ್ರತಿಭೆ ನವ್ಯಾ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರಾಜು ಪೂಜಾರಿ ಅವರನ್ನು ಗೌರವಿಸಲಾಯಿತು. ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಸಹಕರಿಸಿದ ಮೆಸ್ಕಾಂನ ನಾಲ್ಕು ಲೈನ್‌ಮನ್‌ಗಳನ್ನು ಗೌರವಿಸಲಾಯಿತು.