ಜಿಲ್ಲೆ

ಸಾಧನೆ ಹಾದಿಯಲ್ಲಿ ಪೌರ ಕಾರ್ವಿುಕರ ಕುಟುಂಬ

ಚಿಕ್ಕಮಗಳೂರು: ಪೌರಕಾರ್ವಿುಕರ ಕುಟುಂಬದವರು ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಾಗಿ ಉನ್ನತ ಸ್ಥಾನಮಾನ ಗಳಿಸುತ್ತಿದ್ದಾರೆ ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪೌರಸೇವಾ ನೌಕರರ ಸಂಘ ಹಾಗೂ ನಗರಸಭೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಧೂಮಪಾನ, ಮದ್ಯಪಾನದಂಥ ದುಶ್ಚಟಗಳ ದಾಸರಾಗಿ ಅರ್ಧ ವಯಸ್ಸಿಗೆ ಮರಣ ಹೊಂದುತ್ತಿದ್ದರು. ಈಗ ಅಂತಹ ಸ್ಥಿತಿ ಇಲ್ಲ. ಪೌರಕಾರ್ವಿುಕರ ಮಕ್ಕಳು ಡಿಗ್ರಿ, ಪಿಎಚ್​ಡಿ ಮಾಡುತ್ತ ಎಲ್ಲ ರಂಗದಲ್ಲೂ ಮುಂದೆ ಬಂದಿದ್ದಾರೆ. ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತುಗಳನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಪೌರಕಾರ್ವಿುಕನಾಗಿ ಕೆಲಸಕ್ಕೆ ಸೇರಿದರೆ ವಿದ್ಯಾಭ್ಯಾಸದಲ್ಲಿ ಅರ್ಹತೆ ಹೊಂದಿದ್ದರೆ ಪೌರಾಯುಕ್ತನಾಗಿ ಬಡ್ತಿ ಹೊಂದುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ನಗರಸಭೆಗೆ ಬರುವ ಅನುದಾನದಲ್ಲಿ ಶೇ.18ನ್ನು ಪೌರಕಾರ್ವಿುಕರ ಶ್ರೇಯೋಭಿವೃದ್ಧಿಗೆ ಮೀಸಲಿಡಲಾಗಿದೆ ಎಂದರು.

ಕೆಲಸ ಕಾಯಂಗಾಗಿ ಎರಡು ದಶಕಗಳಿಂದ ಬಹಳ ಕಷ್ಟಪಡುತ್ತಿದ್ದರು. ಇದನ್ನು ಮನಗಂಡು ಸಿದ್ದರಾಮಯ್ಯ ಸರ್ಕಾರ ಕಾಯಂ ಮಾಡಲು ಆದೇಶ ಮಾಡಿತ್ತು. ಈಗ ಗುತ್ತಿಗೆ ನೌಕರರಿಗೆ ಕಂಟ್ರಾಕ್ಟರ್ ಕಡೆಯಿಂದ ಸಂಬಳ ನೀಡದೆ ನೇರವಾಗಿ ನಗರಸಭೆಯಿಂದ ಪೌರಕಾರ್ವಿುಕನ ಖಾತೆಗೆ ಹಣ ಜಮಾ ಮಾಡಲಾಗುತ್ತಿದ್ದು ಅವರನ್ನೂ ಹಂತ ಹಂತವಾಗಿ ಕಾಯಂಗೊಳಿಸಲಾಗುತ್ತಿದೆ ಎಂದರು.

ವಸತಿ ರಹಿತರಿಗೆ ನೀಡಲು 73 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಉಳಿದವರಿಗೆ ಆಶ್ರಯ ಸಮಿತಿಯಲ್ಲಿ ನಿವೇಶನ ಮಂಜೂರು ಮಾಡಿ ಮನೆ ಕಟ್ಟಿಕೊಡುವ ಉದ್ದೇಶ ಹೊಂದಲಾಗಿದೆ. ಸ್ವಚ್ಛತೆಯಲ್ಲಿ ಮುಂದಿನ ವರ್ಷದಲ್ಲಿ ಮಾದರಿ ನಗರವಾಗಿ ಪ್ರಥಮ ಸ್ಥಾನಕ್ಕೆ ತರಲು ನಾವು ಸಂಕಲ್ಪ ತೊಟ್ಟಿದ್ದೇವೆ ಎಂದು ತಿಳಿಸಿದರು.

ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ವಿಚಾರದಲ್ಲಿ ಪೌರಕಾರ್ವಿುಕರ ಪಾತ್ರ ಮಹತ್ವದ್ದು. ಮನೆಯ ಕೆಲಸಕ್ಕಿಂತ ಹೆಚ್ಚಾಗಿ ನಗರದ ಬಗ್ಗೆ ಕಾಳಜಿ ವಹಿಸಿ ಜನರ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಿದ್ದಾರೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಆಶ್ರಯ ಸಮಿತಿ ಸದಸ್ಯರಾದ ರಾಜೇಶ್, ವಿಜಯಲಕ್ಷ್ಮೀ, ಮಾಜಿ ಸದಸ್ಯ ನರಸಿಂಹ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎನ್.ಅಣ್ಣಯ್ಯ, ಉಪಾಧ್ಯಕ್ಷ ನಾಗರಾಜ್, ಮಾದಿಗರ ಮೀಸಲಾತಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಡಾ. ಶಿವಪ್ರಸಾದ್ ಇದ್ದರು.