ಬೆಂಗಳೂರು: ದಕ್ಷಿಣ ಕನ್ನಡದ ಸುಳ್ಯದಲ್ಲಿರುವ ಪ್ರಸಿದ್ಧ ದೇವರಗುಂಡಿ ಫಾಲ್ಸ್ ಬಳಿ ಮಾಡೆಲ್ಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿರುವುದು ಇದೀಗ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಿಗ್ವಿಜಯ ನ್ಯೂಸ್ನೊಂದಿಗೆ ಮಾತನಾಡಿದ ಮಾಡೆಲ್ ಬೃಂದಾ ಅರಸ್ ಕ್ಷಮೆಯಾಚಿಸಿದ್ದಾರೆ.
ಅಕ್ಟೋಬರ್ ಆರಂಭದಲ್ಲಿ ನಾವು ದೇವರಗುಂಡಿ ಫಾಲ್ಸ್ಗೆ ಫೋಟೋಶೂಟ್ಗೆಂದು ಹೋಗಿದ್ದೇವು. ಅಲ್ಲಿಗೆ ಕರೆದುಕೊಂಡು ಹೋದ ಸ್ಥಳೀಯರು ದೇವಸ್ಥಾನದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಶೂಟ್ ಮಾಡಬಹುದಾ ಎಂದು ಸ್ಥಳೀಯರನ್ನು ಕೇಳಿದೆವು. ಅದಕ್ಕೆ ಹೌದು ಎಂದು ಹೇಳಿದರು. ನಾವು ಶೂಟ್ ಮಾಡುವಾಗಲೂ ಸಹ ಯಾರೂ ಬಂದು ಕೇಳಲಿಲ್ಲ ಎಂದರು.
ಶೂಟ್ ಮಾಡಿದ ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗಲೂ ಯಾರು ಕೇಳಲಿಲ್ಲ. ಅಕ್ಟೋಬರ್ 27ರಂದು ಸುಳ್ಯದ ಸ್ಥಳೀಯ ಪತ್ರಿಕೆಯಲ್ಲಿ ಫೋಟೋಶೂಟ್ ಕುರಿತು ಲೇಖನವೊಂದು ಪ್ರಕಟವಾಗಿತ್ತು. ಆ ನಂತರವಷ್ಟೇ ಅದೊಂದು ದೇವರ ಸ್ಥಳ ಎಂದು ನಮಗೆ ತಿಳಿಯಿತು. ನಾವು ಮಾಡಿದ್ದು ತಪ್ಪು ಎಂದು ತಿಳಿದು ತಕ್ಷಣ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಹಾಕಿದೆವು ಎಂದು ಬೃಂದಾ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುನ್ನ ಇನ್ಸ್ಟಾಗ್ರಾಂನಿಂದ ವಿಡಿಯೋ ಮತ್ತು ಫೋಟೋ ಡೌನ್ ಮಾಡಿಕೊಂಡಿದ್ದವರು ಇದೀಗ ವಿವಾದ ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದಿಲ್ಲ. ನಾವು ಫೋಟೋಶೂಟ್ ಮಾಡುವಾಗಲೂ ಯಾವುದೇ ತೊಂದರೆ ಇರಲಿಲ್ಲ. ಆದರೆ, ಈಗ ವಿವಾದ ಕೇಳಿಬಂದಿರುವುದರಿಂದ ನಮ್ಮ ವೈಯಕ್ತಿಕ ಹಾಗೂ ಮಾಡೆಲಿಂಗ್ ವೃತ್ತಿಗೆ ತೊಂದರೆಯಾಗಿದೆ ಎಂದರು.
ನಮಗೆ ತಿಳಿಯದೇ ತಪ್ಪು ನಡೆದಿದೆ. ಅದೊಂದು ಪುಣ್ಯ ಸ್ಥಳವೆಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ನಡೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ದಿಗ್ವಿಜಯ ನ್ಯೂಸ್ ಮೂಲಕ ಸ್ಥಳೀಯರಲ್ಲಿ ಕ್ಷಮೆಯಾಚಿಸುತ್ತೇನೆಂದು ಬೃಂದಾ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. (ದಿಗ್ವಿಜಯ ನ್ಯೂಸ್)