ಜಿಲ್ಲೆ

ನಾಳೆ ಎಂಆರ್‌ಪಿಎಲ್‌ನಲ್ಲಿ ಕಲ್ಪಿತ ಕಾರ್ಯಾಚರಣೆ ಸಾರ್ವಜನಿಕರಿಗೆ ಆತಂಕ ಬೇಡ ಸಹಕಾರ ಇರಲಿ

reportermng

ಮಂಗಳೂರು: ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ವತಿಯಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ಜು.29ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಎಂಆರ್‌ಪಿಎಲ್‌ನಲ್ಲಿ ಕಲ್ಪಿತ ಕಾರ್ಯಾಚರಣೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದರಿಯಾಗಿ ತೆಗೆದುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.


ರಾಸಾಯನಿಕ ಅವಘಡಗಳು ಸಂಭವಿಸಿದಾಗ ಅದನ್ನು ಯಾವ ರೀತಿ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ಕಲ್ಪಿತ ಕಾರ್ಯಾಚರಣೆ ನಡೆಯಲಿದೆ. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸುಮಾರು 200 ಮಂದಿ ಭಾಗವಹಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ಸಂದರ್ಭ ಬಾಳ, ಕಳವಾರು ಹಾಗೂ ಮಂಗಳಪೇಟೆಯ ಸುಮಾರು 500 ಮಂದಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಅವರಿಗೆ ಹೊಸಬೆಟ್ಟು ಹಾಗೂ ವೆಂಕಟರಮಣ ಶಾಲಾ ಬಳಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಸುರತ್ಕಲ್‌ನಿಂದ ಬಾಳಕ್ಕೆ ಹೋಗುವ ರಾಜ್ಯ ಹೆದ್ದಾರಿಯನ್ನು ಅರ್ಧ ತಾಸು ಸ್ಥಗಿತಗೊಳಿಸಲಾಗುವುದು. ಘಟನೆಯಲ್ಲಿ ಗಾಯಾಳು, ಮೃತ ಪಟ್ಟವರು, ಸುಟ್ಟ ಗಾಯಗೊಂಡವರನ್ನು ತೋರಿಸಲಾಗುವುದು. ಸಾರ್ವಜನಿಕರು ಆತಂಕಕ್ಕೊಳಗಾಗದೆ ಸಹಕಾರ ನೀಡಬೇಕು ಎಂದವರು ಹೇಳಿದರು.