ನಾಗಮಂಗಲ: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಅಣಕು ಮದುವೆ ಮಾಡಿ ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಕ್ಕಳಿಗೆ ಗಂಡು ಮತ್ತು ಹೆಣ್ಣಿನ ವೇಷ ಹಾಕಿಸಿ ಮದುವೆ ಸಂಪ್ರದಾಯದಂತೆ ಆಚರಣೆ ಮಾಡಲಾಯಿತು. ಮಳೆಗಾಗಿ ಗರಿಕೆ ಹುಲ್ಲು ಪೂಜೆ ಮಾಡುವ ಮುಖಾಂತರ ಊರಿನ ಸುತ್ತ ಮಳೆರಾಯನ ಪದಗಳನ್ನು ಗುನುಗುತ್ತಾ ಪೂಜೆ ಮಾಡುವ ಸಂಪ್ರದಾಯವಿದೆ. ಅದರಂತೆ 24ನೇ ದಿನ ಮದುವೆ ಸಂಪ್ರದಾಯದಂತೆ ಶಾಸ್ತ್ರಗಳನ್ನು ಮಾಡಿ ಮಳೆರಾಯನನ್ನು ಪೂಜಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರೆವಣಿಗೆ ಮಾಡಲಾಯಿತು. ಮದುವೆಯ ದಿಬ್ಬಣದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿಯೂ ಜನಪದ ಗೀತೆಗಳ ಮಳೆರಾಯನ ಪದಗಳನ್ನು ಹಾಡುತ್ತಾ ಗ್ರಾಮಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.