ಜಿಲ್ಲೆ

79 ಗ್ರಾಮಗಳಲ್ಲಿ ಮೊಬೈಲ್ ಗೋಪುರ

ವೀರೇಶ ಸೌದ್ರಿ

ಶಿರಸಿ: ಕಳೆದ ಒಂದು ವರ್ಷದ ಹಿಂದೆ ಸೊಪ್ಪಿನ ಬೆಟ್ಟದ ಭೂಮಿ ಎಂಬ ಕಾರಣಕ್ಕೆ ಜಿಲ್ಲೆಯ 79 ಕುಗ್ರಾಮಗಳಲ್ಲಿ ರದ್ದಾಗಿದ್ದ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಶೀಘ್ರವೇ ಮತ್ತೆ ಆರಂಭಗೊಳ್ಳಲಿದೆ. ಈಗಾಲೇ 30 ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ನಿರ್ಮಾಣಕ್ಕೆ ಅರಣ್ಯ ಭೂಮಿ ಮಂಜೂರಾಗಿದ್ದು, ಹಳ್ಳಿಯ ಜನರ ಮುಖದಲ್ಲಿ ನಗು ಅರಳಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ 4ಜಿ ಸ್ಯಾಚುರೇಷನ್ ಪ್ರಾಜೆಕ್ಟ್‌ನಲ್ಲಿ ಇದುವರೆಗೂ ಮೊಬೈಲ್ ಸಿಗ್ನಲ್ ತಲುಪದ ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಮೊಬೈಲ್ ಗೋಪುರವನ್ನು ಮಂಜೂರು ಮಾಡಲಾಗಿತ್ತು. ಈ ಯೋಜನೆಯಲ್ಲಿ ಜಿಲ್ಲೆಯ 216 ಕುಗ್ರಾಮಗಳಿಗೆ ಮೊಬೈಲ್ ಗೋಪುರ ಮಂಜೂರಾಗಿದ್ದವು. ಕಳೆದ ಮಳೆಗಾಲದಲ್ಲಿಯೇ ಈ ಟವರ್ ಕಾಮಗಾರಿಯೂ ಆರಂಭಗೊಂಡಿವೆ. ಆದರೆ, ಇವುಗಳಲ್ಲಿ 79 ಗ್ರಾಮಗಳಲ್ಲಿ ಕಂದಾಯ ಭೂಮಿ ಅಥವಾ ಗೋಮಾಳ ಜಾಗ ಸಿಗದೇ ಸೊಪ್ಪಿನ ಬೆಟ್ಟ ಜಾಗದಲ್ಲಿ ಮೊಬೈಲ್ ಟವರ್ ಕಾಮಗಾರಿ ಆರಂಭಿಸಿದ್ದರು.
ಆದರೆ, ಬೆಟ್ಟದ ಜಾಗವನ್ನು ಬಿಎಸ್‌ಎನ್‌ಎಲ್‌ಗೆ ಬಿಟ್ಟುಕೊಡಲು ಕೆಲ ತಾಂತ್ರಿಕ ತೊಂದರೆ ಉಂಟಾಗಿತ್ತು. ಬೆಟ್ಟ ಭೂಮಿಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ರೈತರಿಗೆ ಸಮಾನ ಹಕ್ಕಿದೆ. ಹೀಗಾಗಿ ಕೇವಲ ಅರಣ್ಯ ಇಲಾಖೆ ಈ ಭೂಮಿಯನ್ನು ಬಿಎಸ್‌ಎನ್‌ಎಲ್‌ಗೆ ಬಿಟ್ಟುಕೊಡಲು ಸಾಧ್ಯವಿರಲಿಲ್ಲ. ಕಳೆದ ಜುಲೈ ತಿಂಗಳಿನಲ್ಲಿ ಸೊಪ್ಪಿನ ಬೆಟ್ಟ ರೈತರ ಹಕ್ಕಿನ ಭೂಮಿ ಎಂಬ ಕಾರಣದಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಅವರು ಬಿಎಸ್‌ಎನ್‌ಎಲ್‌ಗೆ ಸೊಪ್ಪಿನ ಬೆಟ್ಟದಲ್ಲಿ ನೀಡಿದ್ದ ಜಾಗವನ್ನು ವಾಪಸ್ ಪಡೆದುಕೊಂಡಿದ್ದರು. ಇದರಿಂದಾಗಿ ಈ ಗ್ರಾಮಗಳ ಜನತೆಯ ಮೊಬೈಲ್ ಟವರ್ ಕನಸು ಕನಸಾಗಿಯೇ ಉಳಿದಿತ್ತು.

ಈ 79 ಗ್ರಾಮಗಳಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಪುನಃ ಯತ್ನಿಸಿದ ಬಿಎಸ್‌ಎನ್‌ಎಲ್, ಗ್ರಾಮದ ಅರಣ್ಯ ಪ್ರದೇಶದಲ್ಲಿ 1.85 ಗುಂಟೆ ಜಾಗ ಗುರುತಿಸಿ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಸುದೀರ್ಘ ಅವಧಿಯ ಬಳಿಕ ಅಂತೂ ಅರಣ್ಯ ಪ್ರದೇಶದಲ್ಲಿ ಮೊಬೈಲ್ ಟವರ್‌ಗೆ ಜಾಗ ನೀಡಲು ಅರಣ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈಗಾಗಲೇ 30 ಗ್ರಾಮಗಳಲ್ಲಿ ಅರಣ್ಯ ಜಾಗ ಮಂಜೂರು ಮಾಡಿದ್ದು, ಈಗ ಬಿಎಸ್‌ಎನ್‌ಎಲ್ ಮತ್ತು ಅರಣ್ಯ ಇಲಾಖೆ ನಡುವೆ ಜಾಗದ ಕರಾರುಪತ್ರ ಸಿದ್ಧತೆ ನಡೆದಿದೆ. ಇನ್ನೂ ಕೆಲ ದಿನಗಳಲ್ಲಿಯೇ 20 ಮೊಬೈಲ್ ಟವರ್‌ಗಳಿಗೆ ಅರಣ್ಯ ಇಲಾಖೆ ಮಂಜೂರಾತಿ ಸಿಗುವ ಹಂತದಲ್ಲಿದೆ.

ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ಸೊಪ್ಪಿನ ಬೆಟ್ಟದ ಬದಲು ಅರಣ್ಯದಲ್ಲಿ ಟವರ್ ನಿರ್ಮಿಸಲು ಬಿಎಸ್‌ಎನ್‌ಎಲ್‌ಗೆ ಜಾಗ ಮಂಜೂರಾಗಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಜಾಗ ಮಂಜೂರು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. I ಅಜ್ಜಯ್ಯ ಜೆ. ಆರ್., ಡಿಎಫ್‌ಒ ಶಿರಸಿ