ಗುಂಡ್ಲುಪೇಟೆ : ಇತ್ತೀಚಿನ ದಿನಗಳಲ್ಲಿ ಬಹುತೇಕರು ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿದ್ದು, ಬಳಕೆಯಷ್ಟೇ ದುರ್ಬಳಕೆಯಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಕರ್ನಾಟಕ ಗ್ರಾಹಕರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳವರೂ ಮೊಬೈಲ್ ಬಳಕೆ ಮಾಡುವಂತಾಗಿದ್ದು, ಪ್ರತಿಯೊಬ್ಬರೂ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳ ಬಳಕೆಗೆ ಒಳಗಾಗುತ್ತಿದ್ದಾರೆ. ಯಾರದೋ ಯಾವುದೋ ಪೋಸ್ಟ್‌ಗಳಿಗೆ ಕಮೆಂಟ್ ಹಾಕುವ ಮೂಲಕ ಇವುಗಳಿಗೆ ಮಾರುಹೋಗಿದ್ದಾರೆ. ಅಲ್ಲದೆ ಅಮಾಯಕ ಜನರು ಸೈಬರ್ ವಂಚನೆಗಳಿಗೆ ಒಳಗಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಲ್ ಇನ್‌ಸ್ಪೆಕ್ಟ್ಟರ್ ಜಯಕುಮಾರ್ ಮಾತನಾಡಿ, ಹೆಚ್ಚಿನ ಜನರು ಫೇಸ್‌ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿ, ಫೋಟೋ ಬಳಕೆ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಸುರಕ್ಷಿತ ಆ್ಯಪ್‌ಗಳಿಂದ ಗ್ರಾಹಕರ ಮಾಹಿತಿಗಳು ಕಳ್ಳತನ, ಸೋರಿಕೆಯಾಗುತ್ತಿವೆ. ಉದ್ಯೋಗ ಅದರಲ್ಲಿಯೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಎಚ್ಚರಿಕೆಯಿಂದ ಇರಬೇಕು. ದೇಶವಿದೇಶಗಳಲ್ಲಿರುವ ವಂಚಕರು ನಕಲಿ ವಿಳಾಸ ಪ್ರದರ್ಶಿಸಿ ಬಳಕೆದಾರರ ಅಜ್ನಾನ ಬಳಸಿಕೊಂಡು ವಂಚಿಸುತ್ತಿದ್ದು ಈ ಬಗ್ಗೆ ಬಳಕೆದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಯಾವುದೇ ಪ್ರಕರಣಗಳಲ್ಲಿ ನಗದು ವರ್ಗಾವಣೆಯಂತಹ ವಂಚನೆಗೆ ಒಳಗಾದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸುವ ಮೂಲಕ ವಂಚನೆಯಿಂದ ಪಾರಾಗಬಹುದು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಪವಿತ್ರಾ, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ತುಳಸೀರಾಮ್ ಸೇರಿದಂತೆ ಹಲವರು ಇದ್ದರು.