ಜಿಲ್ಲೆ

ಸೋಸಲೆ ಶ್ರೀಮಠದಲ್ಲಿ ಸಂಚಾರಿ ಆಸ್ಪತ್ರೆಗೆ ಚಾಲನೆ

ಮೈಸೂರು: ಸಾಮಾಜಿಕ ಕಳಕಳಿಯ ಪ್ರತೀಕವಾದ ಸಂಚಾರಿ ಆಸ್ಪತ್ರೆಗೆ ಶ್ರೀರಘುನಾಥ ತೀರ್ಥರ ಮಧ್ಯಾರಾಧನೆ ಪುಣ್ಯದಿನವಾದ ಭಾನುವಾರ ಸೋಸಲೆ ಶ್ರೀವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ತಿ.ನರಸೀಪುರ ತಾಲೂಕು ಸೋಸಲೆ ಗ್ರಾಮದ ಶ್ರೀಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಶ್ರೀಶಾನಂದ, ಅವರು ಸೇವೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಆರೋಗ್ಯ ಸೇವೆ ನೀಡುತ್ತಿದೆ. ಆದರೂ ಅನೇಕ ಕುಗ್ರಾಮದ ಜನರು ಇಂದಿಗೂ ವೈದ್ಯಕೀಯ ಸೇವೆ ವಂಚಿತರಾಗಿದ್ದಾರೆ. ಈ ದಿಸೆಯಲ್ಲಿ ಮಠದಿಂದ ತಿ.ನರಸೀಪುರ ತಾಲೂಕಿನ 25ಕ್ಕೂ ಹೆಚ್ಚು ಗ್ರಾಮಗಳಿಗೆ ಉಚಿತ ಸಂಚಾರಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಮಠ ತಿಂಗಳಿಗೆ 1 ಲಕ್ಷ ರೂ. ನಿರ್ವಹಣಾ ವೆಚ್ಚ ಭರಿಸಿಕೊಂಡು ಸಣ್ಣದಾಗಿ ಆರಂಭಿಸಿದ ಉಚಿತ ಸಂಚಾರಿ ಆರೋಗ್ಯ ಸೇವೆ ಮುಂಬರುವ ದಿನಗಳಲ್ಲಿ ಜಿಲ್ಲೆ, ರಾಜ್ಯಕ್ಕೆ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ದಾನಿಗಳು ಈ ಸೇವಾ ಕಾರ್ಯಕ್ಕೆ ಮುಂದೆ ಬರುತ್ತಿದ್ದಾರೆ. ಸಮಾಜದ ಗಣ್ಯರ, ಸಾಧಕರ ಬಳಿ ಇರುವ ಸಂಪನ್ಮೂಲವನ್ನು ಸಮಾಜಕ್ಕೆ ವಿನಿಯೋಗ ಮಾಡಲು ಇದು ಸಕಾಲ. ಹಳ್ಳಿಗಾಡಿನ ಜನರಿಗೆ ಮೂಲಸೌಕರ್ಯ ನೀಡಲು ನಾವು ಮಾಡಿದ ಸಂಕಲ್ಪ ಕಾರ್ಯರೂಪಕ್ಕೆ ಬರುತ್ತಿರುವುದು ಶ್ಲಾಘನೀಯ ಎಂದರು.

ಮೈಸೂರಿನ ಆಶಾಕಿರಣ ಆಸ್ಪತ್ರೆಯ ಮುಖ್ಯಸ್ಥ ಡಾ.ಗುರುರಾಜ ಮಾತನಾಡಿ, ಸಂಚಾರಿ ಉಚಿತ ಆಸ್ಪತ್ರೆಯು ತಿಂಗಳಿಗೆ ಒಂದು ಬಾರಿ ತಿ.ನರಸೀಪುರ ತಾಲೂಕಿನ ಕುಗ್ರಾಮ ಒಂದನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದೆ ಎಂದರು.

ಹಿರಿಯ ಉದ್ಯಮಿ ಸುಬ್ಬಣ್ಣ, ಸಂಚಾರಿ ವಾಹನ ದಾನಿ ಆರ್. ಅಂಬಿಕಾಪತಿ, ಡಾ. ಡಿ. ಪಿ. ಮಧುಸೂದನಾಚಾರ್ಯ, ಮಠದ ವ್ಯವಸ್ಥಾಪಕ ಶ್ರೀಧರ, ರಾಯರಹುಂಡಿ ಆನಂದ ಇತರರು ಇದ್ದರು.