ಮಂಗಳೂರು: ವ್ಯಕ್ತಿಯೋರ್ವರು ಕಳೆದುಕೊಂಡಿದ್ದ ಮೊಬೈಲ್‌ನ್ನು ಬಳಸಿ ಇನ್ನೋರ್ವ ವ್ಯಕ್ತಿ ಪೋನ್ ಪೇ ಮೂಲಕ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ನಡೆದಿದೆ.
ದೂರುದಾರರು ಡಿ.3ರಂದು ಕಣ್ಣೂರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಮರುದಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ಎರಡು ದಿನಗಳ ಅನಂತರ ಒಂದು ಮೊಬೈಲ್‌ನ ಸಿಮ್ ಆನ್ ಆಗಿತ್ತು. ಅದಕ್ಕೆ ಸಂಬಂಧಿಕರು ಪೋನ್ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್‌ನಲ್ಲಿ ಮೊಬೈಲ್ ಪೋನ್ ಸಿಕ್ಕಿದ್ದು ತಾನು ಕಡಬದಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೆ ನಾಲ್ಕು ದಿನ ಕಳೆದು ಮಂಗಳೂರಿಗೆ ಬಂದು ಮೊಬೈಲ್ ತಂದುಕೊಡುವುದಾಗಿಯೂ ಹೇಳಿದ್ದ. ಆದರೆ ಆತ ತಂದುಕೊಡಲಿಲ್ಲ. ಹಾಗಾಗಿ ದೂರುದಾರರು ಡಿ.12ರಂದು ತನ್ನ ಹಳೆಯ ನಂಬರ್‌ನ ಮೊಬೈಲ್ ಸಿಮ್‌ನ್ನು ಬ್ಲಾಕ್ ಮಾಡಿ ಹೊಸ ಸಿಮ್ ಖರೀದಿಸಿದ್ದರು. ಆರೋಪಿಗಳು ಡಿ.12ರಂದು ದೂರುದಾರರ ಮೊಬೈಲ್‌ನ ಪೋನ್ ಪೇ ಮೂಲಕ 1.82 ಲ.ರೂ.ಗಳನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.