ಜಿಲ್ಲೆ

ವಾರ್ಡ್ ಮಾಹಿತಿಗೆ ಮೊಬೈಲ್ ಆ್ಯಪ್!, ಬಂಟಕಲ್ಲು ವಾರ್ಡ್‌ವಾಣಿಗೆ ಚಾಲನೆ

ಶಿರ್ವ: ಗ್ರಾಮ ಪಂಚಾಯಿತಿ ವಾರ್ಡೊಂದರ ಪರಿಚಯ, ಆಗುಹೋಗುಗಳ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಶನ್ ಒಂದನ್ನು ರೂಪಿಸಲಾಗಿದೆ. ವಾರ್ಡಿನ ಪ್ರಾಚೀನ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕೃಷಿ ಮಾಹಿತಿ, ಅಭಿವೃದ್ಧಿ ಕಾರ್ಯಗಳು, ಸಂಗ್ರಹವಾದ ತೆರಿಗೆ, ಸಾರಿಗೆ ವ್ಯವಸ್ಥೆ, ಸಾಧನೆಗಳು, ದೈನಂದಿನ ಸುದ್ದಿಗಳು, ಸರ್ಕಾರದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳು ಮುಂತಾದ ಸಮಗ್ರ ಮಾಹಿತಿಗಳು ಈ ಆ್ಯಪ್‌ನಲ್ಲಿ ಸಿಗಲಿವೆ.

ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಯಾಶೀಲ ವಾರ್ಡ್‌ಗಳಲ್ಲಿ ಒಂದಾದ ಬಂಟಕಲ್ಲು ವಾರ್ಡ್‌ನಲ್ಲಿ ಇಂತಹ ವಿಶೇಷ ಪ್ರಯತ್ನ ಮಾಡಲಾಗಿದೆ. ವಾರ್ಡ್‌ನ ಸದಸ್ಯ ಕೆ.ಆರ್.ಪಾಟ್ಕರ್ ತಮ್ಮ ವಾರ್ಡ್‌ನ ಸಮಗ್ರ ಮಾಹಿತಿಯನ್ನು ದೇಶವಿದೇಶಗಳಿಗೆ ತಲುಪಿಸಲು ಬಂಟಕಲ್ಲು ವಾರ್ಡ್‌ವಾಣಿ ಹೆಸರಿನೊಂದಿಗೆ ಪ್ರತ್ಯೇಕ ಆ್ಯಪ್ ಒಂದನ್ನು ರೂಪಿಸಿದ್ದಾರೆ. ಬುಧವಾರ ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಪ್ರೊ.ಮಹಾಬಲೇಶ್ವರ ಭಟ್ ಚಾಲನೆ ನೀಡಿದರು.

ಶಿರ್ವದ ಇನ್‌ಫೊಜಂಟ್ ಟೆಕ್ನಾಲಜಿಯವರು ಈ ಆ್ಯಪ್ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಗ್ರಾಪಂ ಸದಸ್ಯ ಆ್ಯಪ್‌ನ ಮೂಲಕ ವಾರ್ಡ್‌ನ ಮಾಹಿತಿ ನೀಡುತ್ತಿರುವುದು ಇದೇ ಪ್ರಥಮ ಎನ್ನಬಹುದಾಗಿದೆ.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಗ್ರಾಮ ಪಂ.ಸದಸ್ಯೆ ವಾಲೆಟ್ ಕಸ್ತಲಿನೊ, ಶಿರ್ವ ರೋಟರಿ ನಿಯೋಜಿತ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ಉಪಸ್ಥಿತರಿದ್ದರು. ಗ್ರಾ,ಪಂ.ಸದಸ್ಯ ಕೆ.ಆರ್.ಪಾಟ್ಕರ್ ಸಮಗ್ರ ಮಾಹಿತಿ ನೀಡಿದರು.

ಪ್ಲೇ ಸ್ಟೋರ್‌ನಲ್ಲಿ ಲಭ್ಯ: ಆ್ಯಂಡ್ರಾಯ್ಡಾ ಮೊಬೈಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ಲಿಂಕ್ ಮೂಲಕವೂ ಲಾಗಿನ್ ಆಗಬಹುದಾಗಿದೆ. ಹೆಸರು ಮತ್ತು ಮೊಬೈಲ್ ಸಂಖ್ಯೆ ಟೈಪ್‌ಮಾಡಿ ರಿಜಿಸ್ಟರ್ ಆಗುವ ಮೂಲಕ ಲಾಗಿನ್ ಆಗಬಹುದು. ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಊರನ್ನು ನಮೂದಿಸಿ ಸಲಹೆ ಸೂಚನೆ ನೀಡಬಹುದಾಗಿದೆ. ಊರಿನ ಪ್ರಮುಖ ಕೃಷಿ ಮಲ್ಲಿಗೆಯನ್ನು ಮುಖಪುಟದಲ್ಲಿರುವ ಲೋಗೋದಲ್ಲಿ ಚಿತ್ರಿಸಿದ್ದಾರೆ.