ಜಿಲ್ಲೆ

ರೈತರು ನೈಸರ್ಗಿಕ ಕೃಷಿ ಪದ್ದತಿಗೆ ಒತ್ತು ನೀಡಲಿ; ಸಚಿವ ಸತೀಶ ಜಾರಕಿಹೊಳಿ

-ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿನಂತಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸುಸ್ಥಿರ ಕೃಷಿ ಪದ್ಧತಿಗಾಗಿ, ಭೂಮಿಯ ಫಲವತತ್ತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಪ್ರಕೃತಿಯನ್ನು ಆಧರಿಸಿ ಬೆಳೆ ಬೆಳೆಯುವ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನ್ಯಾನೋ ಯೂರಿಯಾ, ಕೃಷಿ ಹೊಂಡಗಳಿಗೆ ತಂತಿ ಬೇಲಿಗಳ ನಿರ್ಮಾಣ, ಯೂರಿಯಾ ದುಷ್ಕ ಪರಿಣಾಮ ಕುರಿತು ಬಿತ್ತಿಪತ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರಸ್ತತ ದಿನಗಳಲ್ಲಿ ಬೆಳೆಗಳ ಅಧಿಕಾರಿ ಇಳುವರಿಗಾಗಿ, ಬೆಳೆಗಳ ಸಂರಕ್ಷಣೆಗಾಗಿ ರೈತರು ಅನಿಯಮಿತ ರಸಗೊಬ್ಬರ, ಕೀಟನಾಶಕ ಬಳಕೆ ಮಾಡುತ್ತಿರುವ ಪರಿಣಾಮ ಭೂಮಿ ತನ್ನ ಸತ್ವನ್ನು ಕಳೆದುಕೊಳ್ಳುತ್ತಿದೆ. ಭವಿಷ್ಯದ ದಿನಗಳಲ್ಲಿ ಕೃಷಿ ಭೂಮಿ ಉಳಿಸಿ ಸಂರಕ್ಷಣೆ ಮಾಡಲು ಈಗಿನಿಂದಲೇ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರು ಮುಂದಾಗಬೇಕು ಎಂದು ವಿನಂತಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳ ಶಿಫಾರಸ್ಸಿನಂತೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದು ಉತ್ತಮ. ಅಧಿಕ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಬಳಕೆಯಿಂದ ಭೂಮಿ ಹಾಳಾಗುವುದು ಅಲ್ಲದೆ, ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾವಯವ ಮಾದರಿಯಲ್ಲಿ ಬೆಳೆ ಬೆಳೆಯಲು ರೈತರು ಪ್ರಯತ್ನಿಸಬೇಕು. ರೈತರಿಗೆ ಅವಶ್ಯಕತೆಗೆ ಅನುಗುಣ ಗೊಬ್ಬರ ವಿತರಣೆ ಮಾಡಬೇಕು. ಜಿಲ್ಲೆಯಲ್ಲಿ ಗೊಬ್ಬರ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೇಕರ ಮಾತನಾಡಿ, ಜಿಲ್ಲೆಯಾದ್ಯಂತ ನೈಸರ್ಗಿಕ ಕೃಷಿ ಉತ್ತೇಜಿಸಲು ರೈತರಲ್ಲಿ ನಿರಂತರ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ. ಜತೆಗೆ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಎಲ್ಲ ಬೆಳೆಗಳಿಗೆ ಅತಿಯಾದ ಯೂರಿಯಾ ಬಳಕೆ ಮಾಡದಂತೆ, ಕೃಷಿ ಹೊಂಡಗಳಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸುತ್ತಲು ಬೇಲಿ ಹಾಕುವಂತೆ ಮನೆ ಮನೆಗೆ ತೆರಳಿ ತಿಳುವಳಿಕೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯೂರಿಯಾ ರಸಗೊಬ್ಬರಗಳ ದುಷ್ಟಪರಿಣಾಮದ ಕುರಿತು ಹಾಗೂ ಯೂರಿಯಾ ರಸಗೊಬ್ಬರದ ದಾಸ್ತಾನಿನ ಕುರಿತು ಮತ್ತು ನಾನೋ ಯೂರಿಯಾದ ಬಳಕೆಯ ಕುರಿತು ಸಚಿವರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್, ವಿನಾಯಕ ತುರಾಯಿದಾರ, ಪ್ರಕಾಶ ಪಾಟೀಲ ಇತರರಿದ್ದರು.