ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಶ್ರೀ ಸಾಲೂರುಸ್ವಾಮಿ ಕೃಪಾ ಪ್ರೌಢಶಾಲಾ ಆವರಣದಲ್ಲಿ ಆ.2ರಂದು ಆಲಂಬಾಡಿ ಮಠದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ, ಬಾಲಕರ ವಸತಿ ನಿಲಯ ಉದ್ಘಾಟನೆ ಹಾಗೂ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಗತ್ಯ ಸಿದ್ಧತೆ ನಡೆದಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಕನಕಪುರದ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಾಲೂರು ಮಠದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ, ಕನಕಪುರದ ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಪತಿ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಕುಂದೂರು ಮಠದ ಶ್ರೀ ಡಾ.ಶರತ್ ಚಂದ್ರಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಮಠದ ಜಾಲತಾಣಕ್ಕೆ ಮುಖ್ಯಮಂತ್ರಿ ಸಲಹೆಗಾರ (ಇ ಆಡಳಿತ) ಬೇಳೂರು ಸುದರ್ಶನ್ ಚಾಲನೆ ನೀಡುವರು. ಶಾಸಕ ಆರ್.ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪ್ರಾಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಡಿಎ್ಒ ಏಡುಕುಂಡಲು ಭಾಗವಹಿಸಲಿದ್ದಾರೆ.