ಮಹದೇಶ್ವರ ಬೆಟ್ಟ: ಮಹಾ ಶಿವರಾತ್ರಿ ಹಬ್ಬಕ್ಕೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದ ಭಕ್ತರು ಅಂತರಗಂಗೆಯಲ್ಲಿ ಪುಣ್ಯಸ್ಥಾನ ಮಾಡಿ ಶ್ಯಾಂಪು, ಸೋಪು, ಪೂಜೆ ಮಾಡಿದ ಗಂಧದ ಕಡ್ಡಿಯ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆದು ಹೋಗಿರುವ ಪರಿಣಾಮ ಮೀನುಗಳು ಮೃತಪಟ್ಟಿವೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾ.7ರಿಂದ 11ವರೆಗೂ ವಿಶೇಷ ಪೂಜಾ ಕಾರ್ಯಗಳಿದ್ದವು. ದೇಗುಲಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ. ಸೋಮವಾರ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು. ಮುಡಿ ಸೇವೆ, ಹರಕೆ ಹೊತ್ತವರು, ದೇವರ ದರ್ಶನ ಮಾಡಿದ ಭಕ್ತರು ಇದಕ್ಕೂ ಮುನ್ನ ಶುದ್ಧವಾಗಲು ಅಂತರಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಕ್ತರು ಉಪಯೋಗಿಸಿದ ಶ್ಯಾಂಪು, ಸೋಪು ನೀರನ್ನು ಕಲುಷಿತಗೊಳಿಸಿದೆ. ಅಂತರಗಂಗೆ ದಡದಲ್ಲಿ ಪೂಜೆ ಸಲ್ಲಿಸಿದ ಗಂಧದ ಕಡ್ಡಿಯ ಕವರ್‌ಗಳನ್ನೂ ನೀರಿಗೆ ಬಿಡಲಾಗಿದೆ. ಈ ವಸ್ತುಗಳ ಕವರ್‌ಗಳನ್ನು ಅಲ್ಲಲ್ಲೇ ಎಸೆದಿರುವುದರಿಂದ ನೀರು ಕಲುಷಿತವಾಗಿದೆ.
ತೇಲುತ್ತಿರುವ ಸತ್ತ ಮೀನುಗಳು: ಬೇಸಿಗೆ ಹಿನ್ನೆಲೆಯಲ್ಲಿ ಅಂತರಗಂಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಲ್ಲೇ ಹೇಗೋ ಇದ್ದ ಮೀನುಗಳು ಕೆಲ ಭಕ್ತರು ನೀರನ್ನು ಕಲುಷಿತಗೊಳಿಸಿದ ಕಾರಣ ಮೃತಪಟ್ಟಿವೆ. ರಾಶಿ ರಾಶಿ ಶ್ಯಾಂಪು, ಸೋಪಿನ ಪ್ಲಾಸ್ಟಿಕ್ ಕವರ್‌ಗಳು ಅಂತರಗಂಗೆಯ ಒಡಲು ಸೇರಿವೆ. ರಾಸಾಯನಿಕ ಅಂಶ ನೀರಿನಲ್ಲಿ ಬೆರೆತುಹೋಗಿದೆ. ಅಲ್ಲದೇ, ನೀರಿನ ಮೇಲೆ ಪ್ಲಾಸ್ಟಿಕ್ ಕವರ್‌ಗಳು ತೇಲುತ್ತಿವೆ. ಈ ಪರಿಣಾಮದಿಂದ ಜೀವಬಿಟ್ಟ ಮೀನುಗಳು ಕಸದ ಜತೆಯಲ್ಲಿ ತೇಲುತ್ತಿವೆ.
ಕಸದ ತೊಟ್ಟಿಯಾದ ಅಂತರಗಂಗೆ: ಗುಡ್ಡಗಾಡು ಪ್ರದೇಶವಾಗಿರುವ ಮಹದೇಶ್ವರ ಬೆಟ್ಟ ಮಳೆಯಾಶ್ರಿತ ಪ್ರದೇಶ. ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ ನೀರು ಕಾಡಿನ ಮಧ್ಯೆಯಿಂದ ಹರಿದು ಬರುತ್ತದೆ. ಬೆಟ್ಟಕ್ಕೆ ಇರುವುದು ಇದೊಂದೇ ಜಲಮೂಲ. ಸಣ್ಣದಾಗಿ ಹರಿಯುವ ನೀರು ಹಳ್ಳಕೊಳ್ಳಗಳನ್ನು ತುಂಬಿಕೊಂಡು ಅಂತರಗಂಗೆಯನ್ನು ತಲುಪುತ್ತದೆ. ನಂಜನಗೂಡಿನಲ್ಲಿ ಹರಿಯುವ ಕಪಿಲಾ ನದಿಯಷ್ಟು ರಭಸವೂ ಇಲ್ಲ. ಆಳವೂ ಇಲ್ಲ. ಸಣ್ಣ ತೊರೆಯಂತಿರುವ ಅಂತರಗಂಗೆ ಮಹಾ ಶಿವರಾತ್ರಿಗೆ ಬಂದ ಭಕ್ತರಿಂದಾಗಿ ಕಸದ ತೊಟ್ಟಿಯಂತಾಗಿಬಿಟ್ಟಿದೆ. ದೇವರ ದರ್ಶನಕ್ಕೂ ಇಲ್ಲಿಗೆ ಬಂದು ಮುನ್ನ ಸ್ನಾನ ಮಾಡಿದವರು ಶ್ಯಾಂಪು, ಸೋಪು ಮತ್ತು ಇವುಗಳ ಕವರ್‌ಗಳನ್ನು ಎಸೆದು ಹೋಗಿದ್ದಾರೆ. ನೀರಿನ ಮೇಲೆ ಇವೆಲ್ಲವೂ ತೇಲುತ್ತಿದ್ದು, ಅಂತರಗಂಗೆ ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತ ನೀರಿನಲ್ಲೇ ಸ್ನಾನ:
ಕಲುಷಿತಗೊಂಡಿರುವ ನೀರಿನಲ್ಲೇ ಹಲವು ಭಕ್ತರು ಸ್ನಾನ ಮಾಡಿದರು. ನಾಗಮಲೆ, ಜೇನುಮಲೆ ಭವನ ಮತ್ತು ಇನ್ನಿತರ ಕಡೆಗಳಲ್ಲಿ ಉಳಿಸಿದ್ದ ಭಕ್ತರಿಗೆ ಕೊಠಡಿಗಳನ್ನೇ ನೀರಿನ ಸೌಲಭ್ಯ ಸಿಕ್ಕಿದೆ. ಆದರೆ, ದೇಗುಲದ ಆವರಣದಲ್ಲೇ ಉಳಿದುಕೊಂಡವರಿಗೆ ಸ್ನಾನ ಮಾಡಲು ಖಾಸಗಿ ಸ್ನಾನ ಘಟಕಗಳು, ಅಂತರಗಂಗೆ ಮಾತ್ರ ಇದ್ದು, ಖಾಸಗಿ ಸ್ನಾನ ಘಟಕಗಳು ತುಂಬಿ ತುಳುಕುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಂತರಗಂಗೆಯತ್ತ ತೆರಳಿದ ಭಕ್ತರು ಕಲುಷಿತ ನೀರಿನಲ್ಲೇ ಸ್ನಾನ ಮಾಡಿದರು.
ಮುಂದಿನ ದಿನಗಳಲ್ಲಿ ಅಂತರಗಂಗೆಯನ್ನು ಸ್ವಚ್ಛಗೊಳಿಸಲು ತಿಳಿಸಲಾಗುವುದು. ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಗೆ ನಾನು ಇತ್ತೀಚಿಗಷ್ಟೇ ಬಂದಿದ್ದೇನೆ. ಜಾತ್ರೆ ಅಂಗವಾಗಿ ಪ್ರಾಥಮಿಕ ಸೌಲಭ್ಯಗಳನ್ನಷ್ಟೇ ನೀಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸ್ನಾನದ ಘಟಕಗಳನ್ನು ನಿರ್ಮಾಣ ಮಾಡಲಾಗುವುದು.ಎ.ಇ.ರಘು, ಕಾರ್ಯದರ್ಶಿ, ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ