ಹನೂರು:ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅಧಿಕ ನಾಗರ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿದ್ದು, ಗರ್ಭಗುಡಿಯ ಮುಂಭಾಗದ ಆವರಣವನ್ನು ವಿವಿಧ ಬಗೆಯ ತರಕಾರಿ, ಹಣ್ಣು ಹಾಗೂ ತೆಂಗಿನಕಾಯಿಯಿಂದ ವಿಶೇಷವಾಗಿ ಅಲಂಕರಿಸಿ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಈ ಬಾರಿ ರಾಜಗೋಪುರದ ಮುಂಭಾಗ ಇರಿಸಿದ್ದ ಪುಷ್ಪಲಿಂಗ ಎಲ್ಲರ ಗಮನ ಸೆಳೆಯಿತು.
ಅಮಾವಾಸ್ಯೆ ವಿಶೇಷ ಪೂಜೆ: ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೆಳಗಿನ ಜಾವ 3.30 ರಿಂದ 6.30 ರವರೆಗೆ ದೇವರಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು.
ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲನ್ನು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು. ದೇವರಿಗೆ ಸಂಕಲ್ಪಾಧಿ, ಗಣಪತಿ ಪೂಜೆ, ಪಂಚಕಳಸ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕ ನೆರವೇರಿಸಲಾಯಿತು.
2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟ ಧಾರಣೆ, ಧೂಪ ದೀಪಧಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಉತ್ಸವದಲ್ಲಿ ಭಾಗಿಯಾದ ಭಕ್ತರು:
ಭಕ್ತರು ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದ ಸೇವೆಯಲ್ಲಿ ಪಾಲ್ಗೊಂಡಿದ್ದರು. ಈ ಉತ್ಸವಗಳು ಬೆಳಗ್ಗೆಯಿಂದ ಸಂಜೆಯವರೆಗೆ ಜರುಗಿತು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಉತ್ಸವ ಮೂರ್ತಿಗಳಿಗೆ ಧನ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು. ಈ ವೇಳೆ ಜೈ ಮಹತ್ ಮಲೆಯಾ, ಉಘೇ ಮಾದಪ್ಪ ಉಘೇ.. ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಭಾವ ಮೆರೆದರು. ಹರಕೆಹೊತ್ತ ಭಕ್ತರು ಅಂತರಗಂಗೆಯ ಕಲ್ಯಾಣಿಯಲ್ಲಿ ಪುಣ್ಯ ಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ (ದೇಗುಲದ ಸುತ್ತ ಕಸ ತೆಗೆಯುವ ಕಾರ್ಯ) ನೆರವೇರಿಸಿದರು.
ದೇವರ ದರ್ಶನ ಪಡೆದ ಭಕ್ತರು:
ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಮ.ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಇದರಿಂದ ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿತ್ತು. ಇದರಿಂದ ಭಕ್ತರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು. ಕೆಲ ಭಕ್ತರು 250 ಹಾಗೂ 500 ರೂ. ಟಿಕೆಟ್ ಪಡೆದು ವಿಶೇಷ ದ್ವಾರದ ಮೂಲಕ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಹಿಳೆಯರ ಸಂಖ್ಯೆ ಹೆಚ್ಚಳ: ಮಹಿಳೆಯರು ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಳೆದ ಅಮಾವಾಸ್ಯೆಯ ವೇಳೆ ಬಸ್ಸಿನ ಕೊರತೆಯಿಂದ ಭಕ್ತರು ತೊಂದರೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಅಗತ್ಯ ಬಸ್‌ಗಳನ್ನು ಒದಗಿಸಲಾಗಿತ್ತು. ಚಾಮರಾಜನಗರ ಸೇರಿದಂತೆ ಮೈಸೂರು, ಬೆಂಗಳೂರು, ಬಿಡದಿ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ಕಡೆಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದು ಕಂಡುಬಂತು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನಿರಂತರ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸಲಾಗಿತ್ತು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭಕ್ತರ ಅನುಕೂಲಕ್ಕಾಗಿ 300 ಹೆಚ್ಚುವರಿ ಸಾರಿಗೆ ಬಸ್ ಸೌಕರ್ಯ ಒದಗಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಲಾಡು ರುಚಿ ಪರೀಕ್ಷಿಸಿದ ಕಾರ್ಯದರ್ಶಿ: ಒಂದು ಲಕ್ಷಕ್ಕೂ ಹೆಚ್ಚು ಲಾಡು ತಯಾರಿಸಲಾಗಿತ್ತು. ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದಾ ಅವರು ಲಾಡು ತಯಾರಿಕೆಯನ್ನು ವೀಕ್ಷಿಸಿ ರುಚಿ ಸವಿಯುವುದರ ಮೂಲಕ ಗುಣಮಟ್ಟವನ್ನು ಪರೀಕ್ಷಿಸಿದರು.