ಜಿಲ್ಲೆ

ಪ್ರಾಧಿಕಾರದ 4 ಹೊಸ ಬಸ್‌ಗಳಿಗೆ ಬೆಟ್ಟದಲ್ಲಿ ಪೂಜೆ

ಕಿರಣ್ ಮಾದರಹಳ್ಳಿ

ಹನೂರು: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ 4 ಹೊಸ ಬಸ್‌ಗಳಿಗೆ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಗುರುವಾರ ಪೂಜೆ ಸಲ್ಲಿಸಲಾಯಿತು.

ಜಾತ್ರೆ ಸೇರಿದಂತೆ ವಿಶೇಷ ಸಂದರ್ಭದಲ್ಲಿ ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ದಿಸೆಯಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 1970ರ ದಶಕದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಮ.ಬೆಟ್ಟದಿಂದ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಬಳಿಕ ಕಾಲಕಾಲಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆ 10ಕ್ಕೇರಿದ್ದು, ಬೆಂಗಳೂರು, ಮೈಸೂರು, ನಂಜನಗೂಡು, ಗುಂಡ್ಲುಪೇಟೆ ಹಾಗೂ ಇತರ ಕಡೆಗಳಿಗೆ ಸಂಚರಿಸುತ್ತಿದ್ದವು. ಇದರಿಂದ ಉತ್ತಮ ಆದಾಯವು ಬರುತ್ತಿತ್ತು.

ಬಳಿಕ ಮ.ಬೆಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2014ರಲ್ಲಿ ಮಾದಪ್ಪನ ದೇಗುಲ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿತು. ಆದರೆ ಈ ವೇಳೆಗಾಗಲೇ ಮೈಸೂರು, ನಂಜನಗೂಡು ಹಾಗೂ ಇತರ ಕಡೆಗಳಿಗೆ ಸಂಚರಿಸುತ್ತಿದ್ದ 6 ಬಸ್‌ಗಳು ಹಳೆಯದಾಗಿದ್ದು, ಆಗಾಗ್ಗೆ ಕೆಟ್ಟು ನಿಲ್ಲುತ್ತಿದ್ದವು. ಸಂಚಾರಕ್ಕೆ ಯೋಗ್ಯವಾಗಿಲ್ಲದ 2 ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನುಳಿದ 4 ಬಸ್‌ಗಳು 3 ಬೆಂಗಳೂರು ಕಡೆಗೆ ಹಾಗೂ ಒಂದು ಬಸ್ ಗುಂಡ್ಲುಪೇಟೆಗೆ ಸಂಚರಿಸುತ್ತಿತ್ತು.

ಕಳೆದ ವರ್ಷ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ 4 ಹೊಸ ಬಸ್‌ಗಳಿಗೆ ಅನುಮೋದನೆ ಪಡೆಯಲಾಗಿತ್ತು. ಇದೀಗ ತಮಿಳುನಾಡಿನ ಕರೂರಿನಲ್ಲಿ ಬಸ್‌ಗಳು ತಯಾರಾಗಿದ್ದು, ಬೆಟ್ಟಕ್ಕೆ ಆಗಮಿಸಿದ ಬಸ್‌ಗಳಿಗೆ ದೇಗುಲ ಮುಂಭಾಗ ಪೂಜೆ ಸಲ್ಲಿಸಲಾಯಿತು. ಸಾರಿಗೆ ಇಲಾಖೆಯಲ್ಲಿ ನೋಂದಣಿಯಾದ ಬಳಿಕ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದತಿಳಿಸಿದ್ದಾರೆ.
ಪ್ರಾಧಿಕಾರದ ನೌಕರರಾದ ಮಾದರಾಜ ಅರಸು, ರವಿ, ಬಸ್‌ನ ಚಾಲಕರು, ನಿರ್ವಾಹಕರು ಇದ್ದರು.