ಹನೂರು: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸಾವಿರಾರು ಭಕ್ತರು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದು, ಸೋಮವಾರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ನೂಕುನುಗ್ಗಲು ಏರ್ಪಟ್ಟಿತ್ತು.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚನ್ನಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಸರ್ಕಾರದ ‘ಶಕ್ತಿ’ ಯೋಜನೆಯ ಪರಿಣಾಮ ಸರ್ಕಾರಿ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸಮೇತ ಆಗಮಿಸಿದ್ದರು. ಇದರಲ್ಲಿ ಕೆಲವರು ಮಾದಪ್ಪನ ಸನ್ನಿಧಿಯಲ್ಲಿ ಜರುಗುವ ವಿವಿಧ ಉತ್ಸವಾದಿ ಸೇವೆಗಳನ್ನು ನೆರವೇರಿಸಿ, ಪೂಜೆ ಸಲ್ಲಿಸಿ ಭಾನುವಾರವೇ ತಮ್ಮ ಊರುಗಳಿಗೆ ಹಿಂತಿರುಗಿದರೆ, ಬಹುತೇಕ ಭಕ್ತರು ಬೆಟ್ಟದಲ್ಲೇ ಬೀಡು ಬಿಟ್ಟಿದ್ದರು.
ಬಸ್ಸಿಗಾಗಿ ನೂಕುನುಗ್ಗಲು:
ಭಾನುವಾರ ರಾತ್ರಿ ಮಹದೇಶ್ವರ ಬೆಟ್ಟದಲ್ಲೇ ವಾಸ್ತವ್ಯವಿದ್ದ ಭಕ್ತರು ಸೋಮವಾರ ಊರುಗಳಿಗೆ ವಾಪಸ್ಸಾಗಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಇರಲಿಲ್ಲ. ಇದರಿಂದ ಮಹಿಳೆಯರು ಸರ್ಕಾರಿ ಬಸ್ಸಿಗಾಗಿ ಮುಗಿಬಿದ್ದು ನೂಕುನುಗ್ಗಲು ಉಂಟಾಯಿತು. ಈ ವೇಳೆ ಕೆಲ ಪುರುಷರು ಸೀಟ್‌ಗಾಗಿ ಬಸ್ಸಿನ ಕಿಟಕಿಯ ಮೂಲಕ ಒಳ ನುಗ್ಗಿದರು. ಮಹಿಳೆಯರು ಗಂಟೆಗಟ್ಟಲೆ ನಿಲ್ದಾಣದಲ್ಲೇ ಕಾದು ಕುಳಿತು, ನಂತರ ಆಗಮಿಸಿದ ಬಸ್‌ಗಳಲ್ಲಿ ಕಿಕ್ಕಿರಿದ ಜನ ದಟ್ಟಣೆಯಲ್ಲಿ ಕುಳಿತುಕೊಳ್ಳಲು ಸೀಟು ಸಿಗದೆ, ನಿಂತುಕೊಂಡೇ ಪ್ರಯಾಣ ಮಾಡಿದರು.
ಖಾಸಗಿ ಬಸ್‌ಗಳೂ ಹೌಸ್‌ಫುಲ್:
‘ಶಕ್ತಿ’ ಯೋಜನೆ ಜಾರಿಯ ಬಳಿಕ ನಷ್ಟ ಅನುಭವಿಸುತ್ತಿದ್ದ ಈ ಭಾಗದ 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಸಂಚರಿಸಿದವು. ಸೋಮವಾರ ಸರ್ಕಾರಿ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾದ್ದರಿಂದ ಮಹಿಳೆಯರು ಕೂಡ ಖಾಸಗಿ ಬಸ್‌ಗಳಲ್ಲಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು. ಇದರಿಂದ ಖಾಸಗಿ ಬಸ್‌ಗಳೂ ಹೌಸ್‌ಫುಲ್ ಆಗಿದ್ದವು. ಕೆಲವರು ನಿಂತುಕೊಂಡೇ ಪ್ರಯಾಣಿಸಿದರು.
ಸಾವಿರಾರು ಭಕ್ತರು ಭಾಗಿ:
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣದಲ್ಲಿ ಭಾನುವಾರ ಸಂಜೆ ಜರುಗಿದ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿದ್ದ ಚಿನ್ನದ ತೇರಿನಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 7 ಗಂಟೆ ಸಮಯದಲ್ಲಿ ದೇಗುಲ ಆವರಣದಲ್ಲಿ ನೆರದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ನೆರವೇರಿಸಿ, ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಉತ್ಸವದ ಹಿಂದೆ-ಮುಂದೆ ಸಾಗಿದರಲ್ಲದೆ, ದೇಗುಲ ಆವರಣದಲ್ಲಿದ್ದ ಭಕ್ತರೂ ಇವರ ಜತೆಗೂಡಿದರು. ಉಘೇ ಮಾದಪ್ಪ… ಉಘೇ ಜೈ ಮಹತ್ ಮಲೆಯಾ… ಎಂಬಿತ್ಯಾದಿ ಘೋಷಗಳನ್ನು ಮೊಳಗಿಸುವ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.
ಅನ್ನಸಂತರ್ಪಣೆ: ಆಷಾಢ ಅಮಾವಾಸ್ಯೆಯ 9ನೇ ವರ್ಷದ ಪೂಜೆ ಅಂಗವಾಗಿ ಮಾದಪ್ಪನ ನೆಲೆಬೀಡಾದ ನಾಗಮಲೆಗೆ ಆಗಮಿಸುವ ಭಕ್ತರಿಗೆ ಭಾನುವಾರ ಶ್ರೀ ನಾಗಮಲೆ ಮಾದೇಶ್ವರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಇಂಡಿಗನತ್ತ ಸರ್ಕಾರಿ ಶಾಲೆ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾಗಿಮುದ್ದೆ, ಅವರೆಕಾಳು ಹಾಗೂ ಹೆಚ್ಚೆಳ್ಳು ಗೊಜ್ಜು, ಪಾಯಸ, ಹೆಸರುಕಾಳು-ಹೆಸರುಬೇಳೆ ಪಲ್ಯ, ಅನ್ನ, ನುಗ್ಗೆಕಾಯಿ ಸಾಂಬಾರು, ಹಪ್ಪಳ, ಮಜ್ಜಿಗೆ ತಯಾರಿಸಲಾಗಿತ್ತು. ಸುಮಾರು 6 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದರು.