ಬಿಡದಿ : ಒಣ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಬೈರಮಂಗಲ ಕ್ರಾಸ್ ಬಳಿ ಇರುವ ಘಟಕದಲ್ಲಿ ಭಾನುವಾರ ಬಾಯ್ಲರ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಘಟನೆಗೆ ನಿಖರ ಕಾರಣ ತಿಳಿಯಬೇಕಾಗಿದೆ. ಹಾಗಾಗಿ ಉನ್ನತಮಟ್ಟದ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೊಂದು ದೊಡ್ಡ ತಂತ್ರಜ್ಞಾನ ಒಳಗೊಂಡಿರುವ ಘಟಕವಾಗಿದೆ. ಕಾರ್ಮಿಕರು ಯಾವುದೇ ಸೂಚನೆ ಇಲ್ಲದೆ ಬಾಯ್ಲರ್ ಆಪರೇಟ್ ಮಾಡುವಂತಿಲ್ಲ. ಆದರೆ, ಯಾವ ಕಾರಣಕ್ಕೆ ಓಪನ್ ಮಾಡಿದರೂ ಎಂಬುದು ಗೊತ್ತಾಗಿಲ್ಲ ಎಂದರು.
ತನಿಖೆ ವರದಿ ಬಂದ ನಂತರ ಯಾರು ತಪ್ಪಿತಸ್ಥರಿದ್ದಾರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಗಾಯಾಳುಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದ ಸಚಿವರು, ಈಗಾಗಲೇ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ತಪ್ಪನ್ನು ಸರಿಮಾಡಿ ಉದ್ಘಾಟನೆ
ವಿದ್ಯುತ್ ಉತ್ಪಾದನಾ ಘಟಕ 2024ರ ಜೂನ್‌ನಿಂದ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ. ಎಲ್ಲ ರೀತಿಯಲ್ಲೂ ಪರಿಶೀಲನೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಇಂಥ ದುರ್ಘಟನೆ ಸಂಭವಿಸಿದೆ. ಹಾಗಾಗಿ ಎಲ್ಲವನ್ನೂ ಸರಿಪಡಿಸಿಯೇ ಉದ್ಘಾಟನೆ ಮಾಡುತ್ತೇವೆ. ವಿದ್ಯುತ್ ಉತ್ಪಾದನೆ ಮಾಡುವುದಷ್ಟೇ ನಮ್ಮ ಗುರಿ ಆಗಿಲ್ಲ. ಬೆಂಗಳೂರಿನ ಕಸದ ಸಮಸ್ಯೆ ನಿರ್ವಹಣೆ ದೃಷ್ಟಿ ಇಟ್ಟುಕೊಂಡು ಘಟಕ ಸ್ಥಾಪನೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ವಾಸನೆ ಮುಕ್ತ ಘಟಕ
ಹೊರ ದೇಶಕ್ಕೆ ಹೋಗಿ ಅಲ್ಲಿನ ಘಟಕಗಳನ್ನು ವೀಕ್ಷಣೆ ಮಾಡಿಕೊಂಡು ಬಂದು ಈ ಘಟಕ ಸ್ಥಾಪನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಘಟಕದ ಸುತ್ತ ಕೆಟ್ಟ ವಾಸನೆ ಬರುವುದಿಲ್ಲ. ಲಾರಿಗಳಿಂದ ಕಸ ತರುವಾಗ ಕೂಡ ಹೊದಿಕೆ ಮುಚ್ಚಿಕೊಂಡು ವಾಸನೆ ಬಾರದಂತೆ ತರಲು ಕ್ರಮ ವಹಿಸಲಾಗಿದೆ. ಅದೇ ರೀತಿ ಕಸ ಹಾಕಿದ ನಂತರ ಖಾಲಿ ಲಾರಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರ ಬಳಸಿ ಸ್ವಚ್ಛ ಮಾಡಿ ಹೊರ ಹೋಗುತ್ತದೆ. ಹಿಟಾಚಿ ಕಂಪನಿ ಹಾಗೂ ಇಸಾಕ್ ಕಂಪನಿ ಜಂಟಿಯಾಗಿ ಈ ಘಟಕವನ್ನು ಸ್ಥಾಪನೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಎಎಸ್ಪಿ ಸುರೇಸ್ ಸೇರಿ ಕೆಪಿಸಿಎಲ್ ಇನ್ನಿತರೆ ಅಧಿಕಾರಿಗಳು ಇದ್ದರು.
ಕಚೇರಿಯಲ್ಲಿ ಕುಳಿತು ಪರಿಶೀಲನೆ : ಘಟನಾ ಸ್ಥಳ ಪರಿಶೀಲನೆ ಮಾಡದೆ ಕಚೇರಿಯಲ್ಲಿ ಕುಳಿತು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನಷ್ಟೇ ವೀಕ್ಷಣೆ ಮಾಡಿ ಘಟಕದಿಂದ ಅಧಿಕಾರಿಗಳ ಜತೆ ಸಚಿವರು ಹೊರಬಂದರು ಎಂಬುದು ಚರ್ಚೆಗೆ ಆಸ್ಪದ ಮಾಡಿತು.