ತುಮಕೂರು: ದೇಶದ ಅಭಿವೃದ್ಧಿಯಲ್ಲಿ ಸ್ವಚ್ಛತೆಯ ಪಾತ್ರ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಾನಪದ ಅಕಾಡಮಿ ಅಧ್ಯಕ್ಷೆ ಜೋಗತಿ ಮಂಜಮ್ಮ ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ತುಮಕೂರು ಮಹಾನಗರಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛ ಸರ್ವೇಕ್ಷಣ್ ಅಭಿಯಾನಕ್ಕೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೊದಲು ನಾವು ಸ್ವಚ್ಛರಾಗಬೇಕು, ನಮ್ಮ ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಬೇಕು, ಮನಸ್ಸು ಸ್ವಚ್ಛವಾಗಬೇಕು, ಆಗಷ್ಟೇ ನಾವು ನಾಡಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. ಮನಸ್ಸನ್ನು ಕಲುಷಿತ ಮಾಡಿಕೊಂಡಂತೆ, ನಾವು ನಾಡನ್ನೂ ಕಲುಷಿತಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ನನ್ನ ಮೇಲೂ ದೌರ್ಜನ್ಯ ಎಸಗಿದರು, ನಿಮಿಷಕ್ಕೊಂದು ರೇಪ್ ಆಗುತ್ತಿರುವುದನ್ನು ನೆನೆದರೆ ಕರುಳು ಕಿತ್ತುಬರುತ್ತದೆ. ಲಿಂಗ ಬದಲಾವಣೆ ಸಮಯದಲ್ಲಿ ತಾವು ಕಂಡುಂಡ ಕಷ್ಟವನ್ನು ನೆನೆದ ಮಂಜಮ್ಮ, ಯಾರೂ ಬೇಕೆಂದು ಲಿಂಗ ಬದಲಾವಣೆಗೆ ಇಚ್ಛೆ ಪಡುವುದಿಲ್ಲ, ಇದು ಪ್ರಕೃತಿಯ ನಿಯಮ. ಮುಖ್ಯವಾಹಿನಿಗೆ ಬಂದು ದುಡಿದು ತಿನ್ನುವ ಕಾಯಕಕ್ಕೆ ನಮ್ಮನ್ನು ಬಿಡಿ ಎಂದು ಮನವಿ ಮಾಡಿದರು.
ಈ ಕೈಗಳು ದುಡಿದು ತಿನ್ನಬೇಕು. ನಾವು ತೃತೀಯ ಲಿಂಗಿಗಳು ಕೂಡ ಭಿಕ್ಷಾಟನೆ ಮಾಡುವುದು ಬೇಡ. ದೈಹಿಕವಾಗಿ ನಾನು ಬದಲಾದಾಗ ನನ್ನನ್ನು ಯಾರೂ ಗೌರವಿಸಲಿಲ್ಲ. ನನ್ನಂತಹವಳೇ ಈ ಮಟ್ಟಕ್ಕೆ ಬಂದಿದ್ದೇನೆಂದರೆ, ನೀವು ಇನ್ನೆಷ್ಟು ಎತ್ತರಕ್ಕೆ ಏರಬಹುದು ಎಂಬುದನ್ನು ಆಲೋಚಿಸಿ, ಯಾವ ಹೆಣ್ಣುಮಗಳು ನೇಣು ಹಾಕಿಕೊಳ್ಳಬೇಡಿ, ವಿಷ ಕುಡಿದು ಸಾಯಬೇಡಿ, ಬದುಕನ್ನು ಎದುರಿಸಿ. ಆಗ ನನ್ನ ಹಾಗೆ ಪದ್ಮಶ್ರೀ ಪಡೆಯಬಹುದು ಎಂದು ಉತ್ಸಾಹ ತುಂಬಿದರು.
ಮಹಾನಗರಪಾಲಿಕೆಗೆ ಕೈಜೋಡಿಸುವ ಮೂಲಕ ತುಮಕೂರು ನಗರ ರಾಷ್ಟ್ರಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಲು ಸಹಕರಿಸುವಂತೆ ಪಾಲಿಕೆ ಆಯುಕ್ತೆ ರೇಣುಕಾ ಮನವಿ ಮಾಡಿದರು. ತುಮಕೂರು ಭಾರತದ ಭೂಪಟದಲ್ಲಿ ಅತ್ತ್ಯುತ್ತಮ ನಗರದ ಸ್ಥಾನ ಪಡೆಯಬೇಕು, ಇದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸುವ ಜತೆಗೆ ಶೈಕ್ಷಣಿಕ ಚಟುವಟಿಕೆಗೆ ಅಗತ್ಯ ಸಹಕಾರ ನೀಡಬೇಕೆಂದು ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ಮನವಿ ಮಾಡಿದರು. ಪ್ರಾಂಶುಪಾಲ ಡಾ.ಟಿ.ಆರ್.ಲೀಲಾವತಿ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಅಶ್ವಿನಿ, ರವೀಂದ್ರಶರ್ಮ, ಮಧುಶಾಲಿನಿ, ಫರ‌್ಹೀನ್, ರವೀಶ್ ಇದ್ದರು.