ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳನ್ನು ಪರಿಗಣಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಾಗಿದೆ. ಸಾಮರಸ್ಯದ ವಾತಾವರಣ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಒತ್ತು ನೀಡಿ ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಶೇಷ ಆದ್ಯತೆ ನೀಡುವ ಅಗತ್ಯವಿದೆ ಎಂದು ಎಂಎಲ್‌ಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಭಿಪ್ರಾಯ ಪಟ್ಟರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಶಿಕ್ಷಣ ಹಬ್ ಆಗಿರುವ ದ.ಕ.ಜಿಲ್ಲೆಗೆ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ದೇಶದ ಮಹಾನಗರಗಳಲ್ಲಿ ಇರುವ ರಾತ್ರಿ ಬದುಕಿನ ಪರಿಕಲ್ಪನೆಯೇ ಮಂಗಳೂರಿನಲ್ಲಿ ಇಲ್ಲವಾಗಿದೆ. ಹಾಗಾಗಿ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ.
ಇಲ್ಲಿ ಐಟಿ ಕಂಪನಿಗಳು ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸುವ ಜತೆಗೆ ಮುಂದುವರಿದ ರಾಷ್ಟ್ರಗಳ ನಗರಗಳು ಇಲ್ಲಿನ ಸಂಸ್ಕೃತಿ, ಜಾನಪದ ಕ್ರೀಡೆಗಳನ್ನು ಅರಿತು ತಮ್ಮಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಪೂರಕ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಪಾನ್ ಮತ್ತು ಕೊರಿಯಾದ ದೇಶದ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುವ ಕಾರ್ಯ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
* ತುಳುನಾಡೋತ್ಸವ
ಪಿಲಿಕುಳದಲ್ಲಿ 10 ವರ್ಷಗಳಿಂದ ಸ್ಥಗಿತಗೊಂಡಿರುವ ಕಂಬಳಕ್ಕೆ ಈ ಬಾರಿ ಚಾಲನೆ ನೀಡಲಾಗುತ್ತಿದೆ. ಕೇವಲ ಕಂಬಳ ಮಾತ್ರವಲ್ಲದೆ, ಒಂದು ವಾರ ವಿವಿಧ ಇಲಾಖೆಗಳ ಸಹಕಾರದಲ್ಲಿ ತುಳುನಾಡೋತ್ಸವ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸೆ. 11ರಂದು ಬೆಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೋಡಿಬೆಂಗ್ರೆಯ ಶಾಲೆ ಹಾಗೂ ಬೆಂಜನಪದವಿನ ಸರ್ಕಾರಿ ಪ್ರೌಢಶಾಲೆ ಯನ್ನು ನನ್ನ ಸ್ವಂತ ಹಣ ಹಾಗೂ ಉದ್ಯಮಿಗಳ ಸಹಕಾರದಲ್ಲಿ ಅಭಿವೃದ್ಧಿ ಪಡಿಸಲು ದತ್ತು ಪಡೆದಿದ್ದೇನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ, ಪಂಚಾಯಿತಿ ಕಟ್ಟಡಗಳ ದುರಸ್ತಿ ಸಹಿತ ಇತರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ. ಒಂದಕ್ಕೆ ತಲಾ 5 ಲಕ್ಷ ರೂ.ನಂತೆ ಆರು ವರ್ಷಗಳ ಅವಧಿಯಲ್ಲಿ 380 ಪಂಚಾಯತ್‌ಗಳಿಗೆ ಅನುದಾನ ಹಂಚಿಕೆ ಮಾಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.
.....................