ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಮತಾಬಷಹೀದ ದರ್ಗಾದ ಉತ್ತರ ದಿಕ್ಕಿನ ದ್ವಾರಬಾಗಿಲು ಮೇಲೆ ಆರೋಹಣ ಮಾಡುವ ನೂತನ ಕಲಶವನ್ನು ಗಣ್ಯರು ಪ್ರದರ್ಶಿಸಿದರು. ಸುನೀಲಗೌಡ ಪಾಟೀಲ, ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಶರಣಪ್ಪ ಸುಣಗಾರ ಇದ್ದರು. 
ಜಿಲ್ಲೆ

ಮುಳಸಾವಳಗಿಯಲ್ಲಿ ದ್ವಾರಬಾಗಿಲು ಉದ್ಘಾಟನೆ, ಕಲಶಾರೋಹಣ

ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಹಿಂದು-ಮುಸ್ಲಿಮರು ಒಗ್ಗಟ್ಟಾಗಿ ಇದ್ದುಕೊಂಡು ಭಾವೈಕ್ಯ ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ತಾಲೂಕಿನ ಮುಳಸಾವಳಗಿ ಗ್ರಾಮದ ಹಜರತ್ ಮತಾಬಷಹೀದ್ ಜಾತ್ರೆಯ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ದರ್ಗಾದ ದ್ವಾರಬಾಗಿಲು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧುನಿಕತೆ ಬೆಳೆದಂತೆ ಧಾರ್ಮಿಕ ಆಚರಣಗಳು ಕಡಿಮೆಯಾಗುತ್ತಿವೆ. ಯುವ ಜನಾಂಗ ದೇಸಿ ಸಂಸ್ಕಾರ, ಸಂಸ್ಕೃತಿ ಕಡೆ ಗಮನ ಹರಿಸಬೇಕು. ಈ ಗ್ರಾಮದಲ್ಲಿ ಎಲ್ಲ ಸಮುದಾಯದವರು ಸೇರಿ ಮತಾಬಷಹಿದ್ ದರ್ಗಾದ ಉರುಸು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಮಾತನಾಡಿ, ಮುಳಸಾವಳಗಿ ಸೌಹಾರ್ದ ಜೀವನಕ್ಕೆ ಹೆಸರಾಗಿದೆ. ಇಲ್ಲಿ ಎಲ್ಲರೂ ಸಾಮರಸ್ಯದೊಂದಿಗೆ ಪ್ರತಿಯೊಂದು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ. ಸಾಮರಸ್ಯ ಜೀವನ ಮುಂದಿನ ಜನಾಂಗಕ್ಕೆ ಸಾಗಬೇಕು ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ನಿಂಗರಾಯ ಮಹಾರಾಜರು, ಕಾಂಗ್ರೆಸ್ ಯುವ ಘಟಕದ ರಾಜ್ಯ ಕಾರ್ಯದರ್ಶಿ ಸಂತೋಷಗೌಡ ದೊಡಮನಿ, ಬಿಜೆಪಿ ಯುವ ಮುಖಂಡ ಸಂಗನಗೌಡ ಪಾಟೀಲ (ಸಾಸನೂರ) ಶರಣಗೌಡ ಪಾಟೀಲ, ಸಾಯಬಣ್ಣ ಸೊನಳ್ಳಿ, ಶಿವಪ್ಪ ನಾಯ್ಕೋಡಿ ಇತರರಿದ್ದರು.