ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರಿಗೆ ಶನಿವಾರ ಕರೊನಾ ಪಾಸಿಟಿವ್ ದೃಢಪಟ್ಟಿದ್ದು ಆರೋಗ್ಯದಿಂದ ಇದ್ದಾರೆ. ಸಂಕ್ರಾಂತಿ ಹಬ್ಬದಂದೇ ಕರೊನಾ ಸೋಂಕು ತಗುಲಿರುವುದನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ. ಜತೆಗೆ ಸಂಪರ್ಕಕ್ಕೆ ಬಂದ ಎಲ್ಲರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಶುಕ್ರವಾರ ನವುಲೆ ಇಂದಿರಾಗಾಂಧಿ ಬಡಾವಣೆಯ ಹಿಂಭಾಗದಲ್ಲಿ ಪಾಲಿಕೆ ಪೌರಕಾರ್ಮಿಕರಿಗೆ 17 ಕೋಟಿ ರೂ. ವೆಚ್ಚದಲ್ಲಿ 168 ಮನೆಗಳ ನಿರ್ಮಾಣ ಮಾಡುತ್ತಿದ್ದು ಕಾಮಗಾರಿ ಸ್ಥಳಕ್ಕೆ ರುದ್ರೇಗೌಡ ತೆರಳಿ ಪರಿಶೀಲಿಸಿದ್ದರು. ಈ ವೇಳೆ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಪಾಲಿಕೆ ಆಡಳಿತ ಪಕ್ಷದ ಸದಸ್ಯರು ಜತೆಗಿದ್ದು ಇದೀಗ ಅವರಲ್ಲೂ ಆತಂಕ ಶುರುವಾಗುವಂತೆ ಮಾಡಿದೆ.