ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂಎಲ್ಸಿ ಆಕ್ರೋಶ

Davangere - Desk - Mahesh Babu E

ಹೊಸದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿ ಜನವಿರೋಧಿ ಆಗಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.

ಪಟ್ಟಣದ ಟಿ.ಬಿ.ವೃತ್ತದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬರಗಾಲದಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಕೃಷಿಕರ ನೆರವಿಗೆ ಬರಬೇಕಾದ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ ಎಂದು ದೂರಿದರು.

ಹೊಸದುರ್ಗ ಸೇರಿ ಜಿಲ್ಲೆಯ ತಾಲೂಕುಗಳಲ್ಲಿ ಬರಗಾಲ ಎದುರಾಗಿದೆ. ಇಲ್ಲಿಯವರೆಗೆ ಸರ್ಕಾರ ತಾಲೂಕಿನ ರೈತರ ಸಮಸ್ಯೆ ಕೇಳುವ ಕೆಲಸ ಮಾಡಿಲ್ಲ. ಬರ ಘೋಷಣೆಯೂ ಅಗಿಲ್ಲ. ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಾಲೂಕಿನ ಸ್ಥಿತಿಗತಿ ಕುರಿತು ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾಸಿರಿ, ಮುಖ್ಯಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯನ್ನು ರದ್ದು ಮಾಡಲಾಗಿದೆ. ವಿದ್ಯುತ್ ಕಡಿತದಿಂದ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ಮೂರು ತಿಂಗಳಲ್ಲಿ ರೈತರ ಬದುಕನ್ನು ಸರ್ವನಾಶ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಬುರುಡೇಕಟ್ಟೆ ರಾಜೇಶ್, ತಾಲೂಕಾಧ್ಯಕ್ಷ ಜಗದೀಶ್, ಡಿ.ಎಸ್.ಪ್ರದೀಪ್, ಶಿವಕುಮಾರ, ಪುರಸಭಾ ಸದಸ್ಯರಾದ ಎಂ.ಶ್ರೀನಿವಾಸ್, ಮಂಜುನಾಥ್, ನಾಗರಾಜ್, ದೊಡ್ಡಯ್ಯ, ದಾಳಿಂಬೆ ಗಿರೀಶ್, ಪ್ರಶಾಂತ್ ಮತ್ತಿತರಿದ್ದರು.