ಜಿಲ್ಲೆ

ಎಥೆನಾಲ್ ಘಟಕದ ಕಾಮಗಾರಿ ಸ್ಥಗಿತಗೊಳಿಸಿ: ಜಿಪಂ ಸಿಇಒಗೆ ಮನವಿ ಸಲ್ಲಿಸಿದ ಎಂಎಲ್‌ಸಿಗಳು

reportermys

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಎಥೆನಾಲ್ ಘಟಕ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದೆ. ಇದು ಕಾನೂನು ಪ್ರಕಾರ ತಪ್ಪು. ಆದ್ದರಿಂದ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಎಂಎಲ್‌ಸಿಗಳು, ಕಾರ್ಖಾನೆಯಲ್ಲಿ ಪೆಟ್ರೋಲಿಯಂ ಕ್ಲಾಸ್-ಎ ಎಥೆನಾಲ್ ಸ್ಟೋರೇಜ್ ಘಟಕ ಸ್ಥಾಪನೆ ಸಂಬಂಧ ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಪಂ ಮತ್ತು ತಗ್ಗಹಳ್ಳಿ ಗ್ರಾಪಂನಿಂದ ಎನ್‌ಒಸಿ ಪತ್ರ ಪಡೆದಿಲ್ಲ. ಜಿಲ್ಲಾಧಿಕಾರಿಗಳ ಅನುಮತಿಯನ್ನೂ ಪಡೆದಿಲ್ಲ. ಆದರೆ ಘಟಕದ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಬೇಕು. ಎಥೆನಾಲ್ ಘಟಕ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಒಂದು ಟನ್ ಕಬ್ಬಿನಿಂದ ಸುಮಾರು 60-70 ಲೀಟರ್ ಎಥೆನಾಲ್ ಉತ್ಪಾದಿಸಬಹುದು. ಒಂದು ಲೀಟರ್ ಎಥೆನಾಲ್ ಅನ್ನು ಪೆಟ್ರೋಲಿಯಂ ಕಂಪನಿಗಳು ಸುಮಾರು 67 ರಿಂದ 70 ರೂ.ವರೆಗೆ ಖರೀದಿಸುತ್ತವೆ. ಹೀಗಾಗಿ, ಕಬ್ಬು ನೀಡುವ ರೈತರಿಗೆ ಇದರ ಲಾಭಾಂಶದಲ್ಲಿ ಅಲ್ಪಹಣವನ್ನು ನಿಗದಿ ಮಾಡಬೇಕು. ಎನ್‌ಒಸಿ ಪತ್ರ ಬರೆಯದಿರುವ ಬಗ್ಗೆ ಕೊಪ್ಪ ಗ್ರಾಪಂ ಅಧ್ಯಕ್ಷೆ ಉಮಾಶಂಕರ್ ಸಹ ಪತ್ರ ಬರೆದು ಮನವಿ ಮಾಡಿದ್ದಾರೆ. ಆದ್ದರಿಂದ ಈ ಕುರಿತು ಕ್ರಮ ವಹಿಸುವುದರ ಜತೆಗೆ ಎಥೆನಾಲ್ ಮಾರಾಟದಿಂದ ಬರುವ ಲಾಭಾಂಶದಿಂದ ರೈತರ ಕಬ್ಬಿಗೂ ಉತ್ತಮ ದರ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ರಸ್ತೆ ಗುಂಡಿ ಕುರಿತು ಚರ್ಚೆ: ನಗರಸಭೆ ಕಚೇರಿಗೆ ಭೇಟಿ ನೀಡಿದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಅವರು ಅಧ್ಯಕ್ಷ ಎಚ್.ಎಸ್.ಮಂಜು ಹಾಗೂ ಪೌರಾಯುಕ್ತ ಮಂಜುನಾಥ್ ಅವರೊಂದಿಗೆ ಕೆಲಕಾಲ ಚರ್ಚಿಸಿದರು.

ನಗರದಲ್ಲಿ ಗುಂಡಿಮಯ ರಸ್ತೆಗಳಿಂದ ಹಲವು ಸಮಸ್ಯೆ ಎದುರಾಗಿದೆ. ಈ ಬಗ್ಗೆ ತುರ್ತು ಕ್ರಮ ವಹಿಸಬೇಕು. ಖಾತೆ ವಿಚಾರದಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸದ ಬಗ್ಗೆ ಹಾಗೂ ಉದ್ಯಾನ ನಿರ್ವಹಣೆ, ಸ್ವಚ್ಛತೆ ಕುರಿತು ಕ್ರಮವಹಿಸಬೇಕು ಎಂದು ಹೇಳಿದರು.