ಉಡುಪಿ: ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಇತ್ಯಾದಿ ಪ್ರದೇಶಗಳಲ್ಲಿ ಸಿಎನ್ಜಿ ಕೊರತೆಯಿಂದಾಗಿ ಪಂಪ್ಗಳ ಮುಂದೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ಚಾಲಕರು ಮತ್ತು ಮಾಲೀಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು ಕೂಡಲೇ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್ಜಿ ಕೊರತೆಯಿಂದಾಗಿ ಆಗುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಕೋಟ ಪೂಜಾರಿ ಅವರು ಶನಿವಾರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರನ್ನು ಭೇಟಿಯಾಗಿ ಚರ್ಚಿಸಿದರು. ಸಿಎನ್ಜಿ ಸರಬರಾಜು ಜವಾಬ್ದಾರಿ ಅದಾನಿ ಸಂಸ್ಥೆಯದ್ದಾಗಿದ್ದು, ತಾಂತ್ರಿಕ ತೊಂದರೆಯಿಂದ ಮತ್ತು ಹೆಚ್ಚುವರಿ ಬೇಡಿಕೆಯಿಂದ ಸಮಸ್ಯೆ ಆಗಿದ್ದಾಗಿ ಸಂಸ್ಥೆ ಒಪ್ಪಿಕೊಂಡಿದೆ. ಸಮಸ್ಯೆ ನಿವಾರಿಸುವುದಾಗಿಯೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ ಸಿಎನ್ಜಿ ಬೇಡಿಕೆ ಪರಿಶೀಲಿಸಿ, ತಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ವಿನಂತಿಸಿದರು.
ಉಡುಪಿ: ಜಿಲ್ಲಾದ್ಯಂತ ಸಿಎನ್ಜಿ ಪಂಪ್ಗಳಲ್ಲಿ ಇಂಧನ ಕೊರತೆಯಿಂದ ಆಟೋ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ ನಿಮಾರ್ಣವಾಗಿದ್ದು, ಉಡುಪಿ ಜಿಲ್ಲೆಗೆ ನಿರಂತರ ಸಿಎನ್ಜಿ ಪೂರೈಕೆಗೆ ಕ್ರಮ ವಹಿಸಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಶಾಸಕ ಯಶ್ಪಾಲ್ ಸುವರ್ಣ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಆಟೋಗಳು ಹಾಗೂ ಇತನ್ನಿರ ವಾಹನಗಳು ಸಿಎನ್ಜಿ ಇಂಧನವನ್ನೇ ಅವಲಂಬಿಸಿದ್ದು, ಸಿಎನ್ಜಿ ತೀವ್ರ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ದಿನೇದಿನೆ ಸಿಎನ್ಜಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಆದರೂ ಸಿಎನ್ಜಿ ಪಂಪ್ಗಳ ಕೊರತೆಯಿಂದಲೂ ವಾಹನ ಮಾಲೀಕರು, ಆಟೋ ಚಾಲಕರು ಬಾಡಿಗೆ ಬಿಟ್ಟು ಪಂಪ್ಗಳ ಮುಂದೆ ಕಾಯುವ ಪರಿಸ್ಥಿತಿ ಎದುರಾಗಿದೆ. ಶೀಘ್ರದಲ್ಲಿಯೇ ಪೆಟ್ರೋಲಿಯಂ ಸಚಿವಾಲಯದ ಮಂತ್ರಿ ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್ಜಿ ಕೊರತೆಯಿಂದ ಆಟೋ ಚಾಲಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಇಂಧನ ಕೊರತೆಗೆ ಕಾರಣಗಳ ಕುರಿತು ಮೇ 3ರ ಸಂಚಿಕೆಯಲ್ಲಿ ವಿಜಯವಾಣಿ ವಿಸ್ತೃತ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.