ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಗೆ ನೇಮಕವಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿ ನಗರಕ್ಕೆ ಆಗಮಿಸಿದ ಫಕ್ಕೀರಪ್ಪ ಹನಮಪ್ಪ ಜಕ್ಕಪ್ಪನವರ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಶನಿವಾರ ಸಂಜೆ ಇಲ್ಲಿಯ ರೈಲು ನಿಲ್ದಾಣ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಕಾಂಗ್ರೆಸ್ ನಾಯಕರು ಹೂಮಾಲೆ ಹಾಕಿ ಸ್ವಾಗತಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅನೇಕ ಗಣ್ಯರು ಶಾಲು, ಮಾಲೆ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು. ಅಭಿಮಾನದಿಂದ ಎಲ್ಲರ ಸನ್ಮಾನ ಸ್ವೀಕರಿಸಿದ ಎಫ್.ಎಚ್. ಜಕ್ಕಪ್ಪನವರ, ತಮ್ಮನ್ನು ಎಂ ಎಲ್ ಸಿ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಹಿರಿಯ ನಾಯಕರಿಗೆ ಧನ್ಯವಾದ ಸಲ್ಲಿಸಿದರು.
ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಕ್ಕಪ್ಪನವರ ಹಾಗೂ ಮುಖಂಡರು ಗೌರವ ಸಲ್ಲಿಸಿದರು.
ಛೋಟಾ ಮುಂಬೈ: ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಂ ಎಲ್ ಸಿ ಜಕ್ಕಪ್ಪನವರ, ಕಾಂಗ್ರೆಸ್ ಪಕ್ಷವು ನನ್ನ ನಿಷ್ಠಾ ಸೇವೆಗೆ ನೀಡಿರುವ ಬಹುಮಾನ ಹಾಗೂ ಕಿತ್ತೂರ ಕರ್ನಾಟಕಕ್ಕೆ ಕೊಟ್ಟ ಕಾಣಿಗೆ ಇದಾಗಿದೆ. ಈ ಭಾಗದ ಅಭಿವೃದ್ಧಿಗೆ ಬದ್ಧನಾಗಿ ಕೆಲಸ ಮಾಡುವೆ ಎಂದರು.
ಛೋಟಾ ಮುಂಬೈ ಎಂದು ಕರೆಸಿಕೊಳ್ಳುತ್ತಿದ್ದ ಹುಬ್ಬಳ್ಳಿ ಯಾವ ವೇಗದಲ್ಲಿ ಬೆಳೆಯಬೇಕಾಗಿತ್ತೋ ಅಷ್ಟು ಬೆಳೆದಿಲ್ಲ. ಆರು ವರ್ಷದ ನನ್ನ ಅವಧಿಯಲ್ಲಿ ವಾಣಿಜ್ಯ ನಗರಿಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನ ಮಾಡುವೆ. ಇದಕ್ಕಾಗಿ ಯೋಜನೆ ರೂಪಿಸಲಾಗುವುದು. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಬ್ರಿಟಿಷರು ಹುಬ್ಬಳ್ಳಿಯನ್ನು ಆಯ ಕಟ್ಟಿನ ಪ್ರದೇಶ ಎಂದು ಗುರುತಿಸಿ ಅಭಿವೃದ್ಧಿ ಮಾಡಿದ್ದರು. ವ್ಯಾಪಾರ ಕೇಂದ್ರವಾಗಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಸಾಧ್ಯವಾದಷ್ಟು ಅಭಿವೃದ್ಧಿಗೆ ಶ್ರಮಿಸುವೆ ಎಂದು ಉತ್ತರಿಸಿದರು.
ಮಾಜಿ ಎಂಎಲ್ಸಿ ಎ.ಎಂ. ಹಿಂಡಸಗೇರಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಶರಣಪ್ಪ ಕೊಟಗಿ, ಸತೀಶ ಮೆಹರವಾಡೆ, ಅನಿಲ ಪಾಟೀಲ, ಪ್ರೇಮನಾಥ ಚಿಕ್ಕತುಂಬಳ, ಮೋಹನ ಹಿರೇಮನಿ, ದಶರಥ ವಾಲಿ, ಸಂತೋಷ ಜಕ್ಕಪ್ಪನವರ, ಆರೀಫ್ ಭದ್ರಾಪುರ, ಗುರುನಾಥ ಉಳ್ಳಿಕಾಶಿ, ಇತರರು ಇದ್ದರು.