ಕಲಬುರಗಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿ ಗಣತಿ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಯಲ್ಲಿ ಈಡಿಗ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಈಡಿಗ, ಉಪಜಾತಿ ಕಾಲಂನಲ್ಲಿ ಈಡಿಗ ನಮೂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಈಡಿಗ ಸಮಾಜದ ಮುಖಂಡ ಜಗದೇವ ಗುತ್ತೇದಾರ್ ಮನವಿ ಮಾಡಿದ್ದಾರೆ.
ಈಡಿಗ ಸಮಾಜಕ್ಕೆ ಈಡಿಗ, ಇಳಿಗೇರ, ಕಲಾಲ್, ಗೌಡ, ಗುತ್ತೇದಾರ್ ಸೇರಿ ಇತರೆ 26 ಪರ್ಯಾಯ ಪದಗಳನ್ನು ಬಳಸಲಾಗುತ್ತದೆ. ಬೇರೆ ಬೇರೆ ಪದಗಳ ಬಳಕೆಯಿಂದ ಸಮಾಜದ ಜನಸಂಖ್ಯೆ ನಿಖರವಾಗಿ ಅರಿಯಲು ಸಾಧ್ಯವಾಗುವುದಿಲ್ಲ. ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಆದ್ದರಿಂದ ಎಲ್ಲರೂ ಈಡಿಗ ಎಂದು ನಮೂದಿಸಿದರೆ ಸ್ಪಷ್ಟತೆ ದೊರೆಯುತ್ತದೆ. ಆದ್ದರಿಂದ ಜಾತಿ, ಉಪಜಾತಿ ಕಾಲಂನಲ್ಲಿ ಈಡಿಗ ಎಂದು ನಮೂದಿಸಬೇಕು. ಪ್ರತಿಯೊಬ್ಬರೂ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿ, ಜಿಯೋ ಟ್ಯಾಗ್ ಮಾಡಿಸಬೇಕು. ಸಮೀೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.