ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ವೇದಿಕೆಯನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪರಿಶೀಲಿಸಿದರು.
ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ವಿಶಾಲವಾದ 60 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸಮ್ಮೇಳನದ ಮುಖ್ಯ ವೇದಿಕೆ, ಆಹಾರ, ಪುಸ್ತಕ ಸೇರಿದಂತೆ ಇನ್ನಿತರೆ ಮಳಿಗೆಗಳ ನಿರ್ಮಾಣದ ಸ್ಥಳಕ್ಕೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, 3ನೇ ಬಾರಿಗೆ ಮಂಡ್ಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಇದು ನಮ್ಮ ಮನೆಯ ಹಬ್ಬವಾಗಿದ್ದು, ಕುಟುಂಬದವರೊಂದಿಗೆ ಜಿಲ್ಲೆಯ ಜನತೆ ಒಟ್ಟಾಗಿ ನುಡಿಜಾತ್ರೆಯನ್ನು ಆಚರಿಸಬೇಕಾಗಿದೆ. ರಾಜ್ಯ, ಹೊರ ರಾಜ್ಯ ಹಾಗೂ ದೇಶ, ವಿದೇಶಗಳಿಂದ ಕನ್ನಡಾಭಿಮಾನಿಗಳು, ಸಾಹಿತಿಗಳು ಆಗಮಿಸುತ್ತಿದ್ದಾರೆ. ನೋಂದಣಿಯಾಗಿರುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಅಲ್ಲದೆ, ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಂಬಂಧಿಸಿದ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಕಲ ರೀತಿಯ ವ್ಯವಸ್ಥೆಯಲ್ಲಿ ತೊಡಗಿದ್ದಾರೆ ಎಂದು ವಿವರಿಸಿದರು.
ಭೂ ಸೇನಾ ನಿಗಮದ ಮುಖ್ಯ ಇಂಜಿನಿಯರ್ ಸೋಮಶೇಖರ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಹರ್ಷ, ಎಇಇ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ವೇದಿಕೆ ನಿರ್ಮಾಣ ಹೊಣೆ ಹೊತ್ತಿರುವ ಷರೀಪ್, ಗೋಪಾಲಕೃಷ್ಣ ಇತರರಿದ್ದರು.