ಲೋಕಾಯುಕ್ತ ಎಸ್​ಪಿ ಪುರುಷೋತ್ತಮ್​  
ಜಿಲ್ಲೆ

ಜೆಡಿಎಸ್ ಅಭ್ಯರ್ಥಿಗೇ ಮತ ಹಾಕುವಂತೆ ಪಂಚಾಯತ್ ಸದಸ್ಯರಿಗೆ ಧಮ್ಕಿ: ಲೋಕಾಯುಕ್ತ ಎಸ್​ಪಿ ವಿರುದ್ಧ ದೂರು

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಚಟುವಟಿಕೆ ಗರಿಗೆದರಿದ್ದು, ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿನ ನಾಯಕರು ಚುರುಕುಗೊಂಡಿದ್ದಾರೆ. ಮತ್ತೊಂದೆಡೆ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಆಪ್ತ ಎನ್ನಲಾದ ಪೊಲೀಸ್ ಸೂಪರಿಂಟೆಂಡೆಂಟ್​​ ಪುರುಷೋತ್ತಮ್ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್. ರವಿ ದೂರು ನೀಡಿದ್ದಾರೆ. ಈ ಹಿಂದೆ ರಾಮನಗರದಲ್ಲಿ ಕಾರ್ಯನಿರ್ವಹಿಸಿದ್ದ ಪುರುಷೋತ್ತಮ್, ಪ್ರಸ್ತುತ ಬಳ್ಳಾರಿಯಲ್ಲಿ ಲೋಕಾಯಕ್ತ ಎಸ್​ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿಗೇ ಮತ ಚಲಾಯಿಸಬೇಕು ಎಂದು ಪಂಚಾಯತ್ ಸದಸ್ಯರಿಗೆ ಪುರುಷೋತ್ತಮ್ ಧಮ್ಕಿ ಹಾಕುತ್ತಿದ್ದಾರೆ ಎಂಬುದಾಗಿ ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರಿಗೆ ರವಿ ದೂರು ನೀಡಿದ್ದಾರೆ.

ಮಾಜಿ ಸಿಎಂ ಎಚ್​ಡಿಕೆ ಆಪ್ತರಾಗಿರುವ ಪುರುಷೋತ್ತಮ್ ಬಳ್ಳಾರಿಯಲ್ಲಿನ ತಮ್ಮ ಕರ್ತವ್ಯ ಬಿಟ್ಟು ಬಂದು ಇಲ್ಲಿ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲ ಪಂಚಾಯ್​ ಸದಸ್ಯರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿ ಬೆಂಗಳೂರಿನ ಲೋಕಾಯಕ್ತ ಕಚೇರಿಗೂ ದೂರು ನೀಡಿದ್ದಾರೆ.