ಜಿಲ್ಲೆ

ವಿಧಾನ ಪರಿಷತ್‌ಗೆ ಶೇ.91.60ರಷ್ಟು ಮತದಾನ: ಜಿಲ್ಲೆಯಲ್ಲಿ ಗೈರಾದ 454 ಮತದಾರರು

ಕೆ.ಎನ್.ರಾಘವೇಂದ್ರ

ಮಂಡ್ಯ: ವಿಧಾನ ಪರಿಷತ್‌ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸೋಮವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.91.60ರಷ್ಟು ಮತದಾನವಾಗಿದೆ.
ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡಿರುವ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿಯನ್ನು ಹೊರತುಪಡಿಸಿ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಯಿತು. ಜಿಲ್ಲೆಯಲ್ಲಿ ಒಂಭತ್ತು ಕೇಂದ್ರದಲ್ಲಿ ಮತದಾನ ನಡೆಯಿತು. ಒಟ್ಟು 5,403 ಮತದಾರರ ಪೈಕಿ 4,949 ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 2925 ಪುರುಷ ಹಾಗೂ 2024 ಮಹಿಳಾ ಶಿಕ್ಷಕರು ಮತದಾನ ಮಾಡಿದ್ದಾರೆ.
ಆರಂಭದ ಸಂದರ್ಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಹೊತ್ತು ಕಳೆದಂತೆ ಮತಗಟ್ಟೆಯತ್ತ ಶಿಕ್ಷಕರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲೆಯ ಕೆಲ ಮತಕೇಂದ್ರಗಳಿಗೆ ಎನ್‌ಡಿಎ ಅಭ್ಯರ್ಥಿ ವಿವೇಕಾನಂದ ಹಾಗೂ ಮಾಜಿ ಎಂಎಲ್ಸಿ ವಾಟಾಳ್ ನಾಗರಾಜು ಅವರು ಭೇಟಿ ನೀಡಿ ಶಿಕ್ಷಕರ ಮತ ಕೋರಿದರೆ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮತಯಾಚಿಸಿದರು.

ಮತಗಟ್ಟೆಯ ಹೊರಭಾಗದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿ, ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಶಿಕ್ಷಕರ ಮನವೊಲಿಸುತ್ತಿದ್ದರು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಹಾಕಿದ್ದು, ಜೂ.6ರಂದು ಲಿತಾಂಶ ಹೊರಬೀಳಲಿದೆ.
454 ಮತದಾರರು ಗೈರು: ಜಿಲ್ಲೆಯಲ್ಲಿ 454 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದನ್ನು ಮರೆತರು. 3,127 ಪುರುಷ ಮತದಾರರ ಪೈಕಿ 2,925 ಜನರು ಹಾಗೂ 2,276 ಮಹಿಳಾ ಮತದಾರರ ಪೈಕಿ 2,024 ಜನರು ಮತ ಚಲಾಯಿಸಿಲ್ಲ. ಸಂವಿಧಾನಬದ್ಧವಾಗಿ ನೀಡಿರುವ ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಹೇಳುವ ಸ್ಥಾನದಲ್ಲಿರುವ ಶಿಕ್ಷಕ ವರ್ಗವೇ ಮತದಾನದಿಂದ ದೂರ ಉಳಿದಿದ್ದು ವಿಪರ್ಯಾಸ.
ಇನ್ನು ಮತಕೇಂದ್ರವಾರು ಅಂಕಿ ಅಂಶವನ್ನು ಗಮನಿಸಿದರೆ ಜಿಲ್ಲೆಯಲ್ಲಿ ನಾಗಮಂಗಲದಲ್ಲಿ ಹೆಚ್ಚು ಅಂದರೆ ಶೇ.96.84ರಷ್ಟು ಮತದಾನವಾಗಿದೆ. ಅಂತೆಯೇ ಶೇ.82.37ರಷ್ಟು ಮತದಾನದೊಂದಿಗೆ ಶ್ರೀರಂಗಪಟ್ಟಣ ಕೊನೆಯ ಸ್ಥಾನದಲ್ಲಿದೆ.