ಮಂಡ್ಯ: ದಕ್ಷಿಣ ಶಿಕ್ಷಕರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಂತೆಯೇ ಜೆಡಿಎಸ್ ಅಭ್ಯರ್ಥಿ ಎನ್ನಿಸಿಕೊಂಡಿರುವ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮತಯಾಚನೆ ಆರಂಭಿಸಿದ ಬೆನ್ನಲ್ಲೇ ಮತ್ತೊರ್ವ ಎಂಎಲ್‌ಸಿ ಮರಿತಿಬ್ಬೇಗೌಡ ಕೂಡ ಮತಬೇಟೆಗಿಳಿದಿದ್ದಾರೆ. ಆದರೆ ಜೆಡಿಎಸ್ ಸದಸ್ಯರಾಗಿರುವ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂದು ಪ್ರಚಾರ ನಡೆಸುತ್ತಿದ್ದಾರೆ.
ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಚುನಾವಣೆ ಅದಾಗಲೇ ರಂಗೇರಿದೆ. ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುವುದು ನಿಶ್ವಿತವಾಗಿದೆ. ಆದರೆ ಮೈತ್ರಿ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ನಿಲುವು ಏನಿದೆ ಎಂಬುದು ಸಧ್ಯದಲ್ಲಿಯೇ ಹೊರಬೀಳಲಿದೆ. ಈ ನಡುವೆ ದಳ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ಶಿಕ್ಷಕರ ಮನಗೆಲ್ಲುವ ಕಸರತ್ತು ಮಾಡುತ್ತಿದ್ದಾರೆ.
ಪ್ರತಿಷ್ಠೆಯಾಗಿರುವ ಚುನಾವಣೆ: ದಕ್ಷಿಣ ಶಿಕ್ಷಕರ ಚುನಾವಣೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದೆ. ಈಗಾಗಲೇ ಎರಡು ಎಂಎಲ್‌ಸಿ ಜತೆಗೆ ಆರು ವಿಧಾನಸಭಾ ಕ್ಷೇತ್ರಗಳನ್ನು ವಶಪಡಿಸಿಕೊಂಡು ದಳಕ್ಕೆ ಪೆಟ್ಟು ನೀಡಿರುವ ಕಾಂಗ್ರೆಸ್, ಈ ಚುನಾವಣೆಯನ್ನು ಗೆದ್ದು ಬೀಗಲು ಸಜ್ಜಾಗುತ್ತಿದೆ.
ಕಳೆದ ಬಾರಿ ಜೆಡಿಎಸ್‌ನಿಂದ ಕಣಕ್ಕಿಳಿದು ಜಯಗಳಿಸಿದ್ದ ಮರಿತಿಬ್ಬೇಗೌಡ, ಅನಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಇನ್ನೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಆದ್ದರಿಂದ ಶೀಘ್ರದಲ್ಲೇ ‘ಕೈ’ ಹಿಡಿಯಲಿದ್ದಾರೆ. ಅಂತೆಯೇ ಸಧ್ಯದ ಬೆಳವಣಿಗೆ ನೋಡುವುದಾದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಅಂತೆಯೇ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಾಥ್ ನೀಡಿದ ಹಿನ್ನೆಲೆಯಲ್ಲಿ ಎಂಎಲ್‌ಸಿ ಮಧು ಮಾದೇಗೌಡ, ಇದೀಗ ಮರಿತಿಬ್ಬೇಗೌಡ ಅವರಿಗೆ ಸಾಥ್ ನೀಡುತ್ತಿದ್ದಾರೆ. ಮಾತ್ರವಲ್ಲದೆ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.
ಇನ್ನು ಅತ್ತ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಕೂಡ ಘೋಷಣೆ ಮಾಡಿದ್ದಾರೆ. ಅದರಂತೆ ಈ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾದ ಅನಿವಾರ್ಯತೆ ದಳಕ್ಕಿದೆ. ಆದ್ದರಿಂದ ಮುಂದಿನ ದಿನದಲ್ಲಿ ಚುನಾವಣಾ ಕಣ ಇನ್ನಷ್ಟು ರಂಗೇರಲಿದೆ.
ಶಿಕ್ಷಕರಿಗೆ ನಿರಂತರ ಹೋರಾಟ: ಉಪನ್ಯಾಸಕರು ಹಾಗೂ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಮಾಡಿದ್ದೇನೆ. ಮಾತ್ರವಲ್ಲದೆ ಅವುಗಳನ್ನು ಪರಿಹರಿಸುವಲ್ಲಿ ಶ್ರಮಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ನಗರದ ಹೊರವಲಯದ ಮಂಜುನಾಥ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಸದನಗಳಲ್ಲಿ ಅನೇಕ ಪ್ರಶ್ನೆಗಳನ್ನು ಹಾಕಿ ಸರ್ಕಾರದಿಂದ ಉತ್ತರ ಪಡೆಯುವುದಲ್ಲದೆ ಧರಣಿ, ಪ್ರತಿಭಟನೆ, ಸಭಾತ್ಯಾಗ ಮುಂತಾದ ಅಸ್ತ್ರ ಬಳಸಿ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸಿದ್ದೇನೆ. ಸರ್ಕಾರ ಹೊರಡಿಸುವ ಅವೈಜ್ಞಾನಿಕ ಆದೇಶದಿಂದಾಗುತ್ತಿದ್ದ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರಂತರ ಹೋರಾಟ ಮಾಡುತ್ತಿದ್ದೇನೆ. ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲಾ-ಕಾಲೇಜುಗಳ ಉಪನ್ಯಾಸಕರು ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದ್ದು, ಸರ್ಕಾರದ ಗಮನ ಸೆಳೆದು ತಮ್ಮಗಳ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.
ಎಂಎಲ್‌ಸಿ ಮಧು ಮಾದೇಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆ ಬಗೆಹರಿಸಲು ನಿರಂತರ ಶ್ರಮಿಸುತ್ತಿರುವ ಮರಿತಿಬ್ಬೇಗೌಡ ಅವರನ್ನು ಮರು ಆಯ್ಕೆ ಮಾಡಲು ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಮರಿತಿಬ್ಬೇಗೌಡ ಅವರನ್ನು ಗೆಲ್ಲಿಸಿದರೆ ಶಿಕ್ಷಕರ ಅನೇಕ ಜ್ವಲಂತ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ತಿಳಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಆಬಲವಾಡಿ ಜಯರಾಂ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗೇಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಗೇಶ್, ಜಯರಾಮು ಕೀಲಾರ, ಉಪನ್ಯಾಸಕರಾದ ಲಿಂಗರಾಜು, ಮಂಜೇಶ್ ಕುಮಾರ್ ಹಾಗೂ ಶಿಕ್ಷಕರು ಇದ್ದರು.