ಮಂಗಳೂರು: ವಿಧಾನ ಪರಿಷತ್‌ನ ದ.ಕ ದ್ವಿಸದಸ್ಯ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಜಯಗಳಿಸಿದ್ದಾರೆ. ಇಬ್ಬರೂ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಜಯ ಸಾಧಿಸಿರುವುದು ವಿಶೇಷ. ಕೋಟ ಶ್ರೀನಿವಾಸ ಪೂಜಾರಿ 3693 ಮತ ಪಡೆದು ಸತತ ನಾಲ್ಕನೇ ಬಾರಿಗೆ ಮತ್ತು ಮಂಜುನಾಥ ಭಂಡಾರಿ 2077 ಮತ ಪಡೆದು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಉಳಿದಂತೆ ಎಸ್‌ಡಿಪಿಐ ನ ಶಾಫಿ ಕೆ. 203 ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ಒಟ್ಟು 6040 ಮತಗಳಲ್ಲಿ 6013 ಮತಗಳು ಚಲಾವಣೆಯಾಗಿತ್ತು. ಮೊದಲಿಗೆ ಮತಪತ್ರಗಳನ್ನು ಮಿಶ್ರಣ ಮಾಡಿ, ತಲಾ 25 ಮತಪತ್ರಗಳ ಬಂಡಲ್ ಮಾಡಲ್ ಮಾಡಿ, 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಿತು. ಒಂದು ಟೇಬಲ್‌ನಲ್ಲಿ ಸುಮಾರು 540 ಮತಗಳನ್ನು ಎಣಿಕೆ ಮಾಡಲಾಯಿತು.
ಗೆಲುವಿನ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಒಂದು ರೂಪಾಯಿ ಕೂಡಾ ಮತದಾರರಿಗೆ ಹಂಚದೆ, ಬಿಜೆಪಿ ಗೆಲುವು ಸಾಧಿಸಿದೆ. ಇದು ನಿಜವಾದ ಮತದಾರರ ಒಲವು. ಕಾರ್ಯಕರ್ತರ ಶ್ರಮದಿಂದ ಗೆಲುವಾಗಿದ್ದು, ಹಾಗಾಗಿ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಪಂಚಾಯತ್‌ರಾಜ್ ವ್ಯವಸ್ಥೆಯ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗೆ ನನ್ನ ಸಮಯ ಮೀಸಲು ಎಂದರು.
ಪ್ರಥಮ ಬಾರಿಗೆ ಪರಿಷತ್ ಪ್ರವೇಶ ಮಾಡಿದ ಮಂಜುನಾಥ ಭಂಡಾರಿ ಪ್ರತಿಕ್ರಿಯೆ ನೀಡಿ, ನನ್ನ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು. ದ.ಕ ಹಾಗೂ ಉಡುಪಿಯ ಎಲ್ಲ ಕಾಂಗ್ರೆಸ್ ನಾಯಕರು ಒಮ್ಮತದಿಂದ ಕೆಲಸ ಮಾಡಿದ ಕಾರಣ ನಿರೀಕ್ಷೆಗೂ ಮೀರಿಮತ ಗಳಿಸಿದ್ದೇನೆ. ಪ್ರಥಮ ಪ್ರಾಶಸ್ತ್ಯದ ವಿಜಯಕ್ಕೆ 300 ಮತಗಳ ಕೊರತೆ ಇದ್ದರೂ, ಮತದಾರರು ಅಗತ್ಯ ಮತನೀಡಿ ಆಶೀರ್ವಾದ ಮಾಡಿದ್ದಾರೆ ಎಂದರು.