ಬೆಂಗಳೂರು ಗ್ರಾಮಾಂತರ: ಪೊಲೀಸ್ ಬಂದೋಬಸ್ತ್ ನಡುವೆಯೂ ಜಿಲ್ಲೆಯ ಹಲವೆಡೆ ಗಲಾಟೆ, ಮಾತಿನ ಚಕಮಕಿ ಸೇರಿ ವಿವಿಧ ಪಕ್ಷಗಳ ಕಾರ್ಯಕರ್ತರ ಹೋಯ್ ಕೈ ಜಗ್ಗಾಟದ ಮಧ್ಯೆ ಶಿಕ್ಷಕರ ಕ್ಷೇತದ ಮತದಾನ ನಡೆದಿದೆ.
ಜಿಲ್ಲೆಯಲ್ಲಿ 17 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಶೇ.90 ಮತ ಚಲಾವಣೆಯಾಗಿದೆ. ಬೆಳಗ್ಗೆಯಿಂದಲೇ ಉತ್ಸಾಹದಿಂದ ಆಗಮಿಸಿದ ಮತದಾರರು ನಿಯಮ ಪಾಲನೆಯೊಂದಿಗೆ ಮತದಾನ ಮಾಡಿದರು. ಕೆಲವೆಡೆ ಶಾಂತಿಯುತವಾಗಿದ್ದರೆ ದೊಡ್ಡಬಳ್ಳಾಪುರ, ನೆಲಮಂಗಲ ಭಾಗಗಳಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ತಳ್ಳಾಟ ನೂಕಾಟದೊಂದಿಗೆ ಗದ್ದಲವೆಬ್ಬಿಸಿದ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಪರಿಸ್ಥಿತಿ ತಹಬಂದಿಗೆ ತಂದಿದ್ದಾರೆ.
ಜಿಲ್ಲಾಧಿಕಾರಿ ಪರಿಶೀಲನೆ: ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಅಪರ ಜಿಲ್ಲಾಧಿಕಾರಿ ಜಗದೀಶ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಕರೊನಾ ಮುಂಜಾಗ್ರತಾ ಕ್ರಮ ಪರಿಶೀಲಿಸಿದರು.
ಮತಯಾಚನೆಗೆ ಖಾಕಿ ಬ್ರೇಕ್: ಜಿಲ್ಲೆಯ ಹಲವು ಮತಗಟ್ಟೆಗಳ ಬಳಿಯೇ ವಿವಿಧ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಪರ ಮತಯಾಚನೆ ನಡೆಸುತ್ತಿದ್ದ ದೃಶ್ಯ ಕಂಡುಬಂತು. ಈ ವೇಳೆ ಎಚ್ಚೆತ್ತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಮತಗಟ್ಟೆಯಿಂದ 100 ಮೀಟರ್ ಅಂತರರಲ್ಲಿ ಜನ ಗುಂಪುಗೂಡದಂತೆ ತಿಳಿಹೇಳಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣದ ನಿರ್ಮಾಣವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದೊಡ್ಡಬಳ್ಳಾಪುರದಲ್ಲಿ ಹೋಯ್ ಕೈ: ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮತದಾನದ ಕೇಂದ್ರದ ಬಳಿ ಕಾರ್ಯಕರ್ತರ ನಡುವೆ ಮಾರಾಮಾರಿಯೇ ನಡೆಯಿತು. ನಡು ರಸ್ತೆಯಲ್ಲೆ ಕೈ ಕೈ ಮಿಲಾಯಿಸಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ತಳ್ಳಾಟ ನೂಕಾಟ ನಡೆಸಿದರು. ನಡು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು, ಶಿಕ್ಷಕರು ಮತಗಟ್ಟೆ ಬಳಿ ಒಬ್ಬರಿಗೊಬ್ಬರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಮತಗಟ್ಟೆ ಒಳಗೆ ಬಿಜೆಪಿ ಪ್ರಚಾರ ಹಿನ್ನೆಲೆ ಶುರುವಾದ ಗಲಾಟೆ ಅತಿರೇಕಕ್ಕೆ ತಿರುಗಿ ಪರಸ್ಪರ ನಿಂದನೆ, ಗಲಾಟೆಗೆ ಎಡೆಮಾಡಿಕೊಟ್ಟಿತು.
ಕರೊನಾ ನಿಯಮ ನೇಪಥ್ಯ: ಕರೊನಾ ನಿಯಮ ಪಾಲನೆಗೆ ಜಿಲ್ಲಾಡಳಿತ ರೂಪಿಸಿದ್ದ ನಿಯಮಗಳಿಗೆ ಕವಡೆ ಕಿಮ್ಮತ್ತು ಸಿಗಲಿಲ್ಲ. ಪೊಲೀಸ್ ಬಂದೋಬಸ್ತ್ ನಡುವೆಯೂ ಮತದಾರರು ಕಾಟಾಚಾರಕ್ಕೆ ಎಂಬಂತೆ ಮಾಸ್ಕ್ ಧರಿಸಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪುಗೂಡುವುದು ಹಸ್ತಲಾಘವ ಮಾಡುವುದು ಸಾಮಾನ್ಯ ಎಂಬಂತಿತ್ತು.