ಜಿಲ್ಲೆ

ಪರಿಷತ್ ಚುನಾವಣೆ: ಮೈಸೂರಿನಲ್ಲಿ ಜೂ.6 ರಂದು 4 ಕ್ಷೇತ್ರಗಳ ಮತ ಎಣಿಕೆ

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಈ ಬಾರಿ ಗೆಲುವು ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಇದ್ದು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ. ವಿವೇಕಾನಂದ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಉಳಿದಂತೆ ಕರ್ನಾಟಕ ಜನತಾ ಪಕ್ಷದ ಎಂ. ನಾಗೇಂದ್ರ ಬಾಬು ಮದ್ದೂರು, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾದ ಡಾ.ಎಸ್. ಅನಿಲ್ ಕುಮಾರ್, ಕದಂಬ ನಾ ಅಂಬರೀಷ್, ನಾಗಮಲ್ಲೇಶ್, ನಿಂಗರಾಜು ಎಸ್. ಶಂಕನಪುರ, ಕೆ.ಸಿ.ಪುಟ್ಟಸಿದ್ದಶೆಟ್ಟಿ, ಡಾ.ಹ.ರಾ. ಮಹೇಶ್, ರಾಜು ಕೆ. ಸಿದ್ದಯ್ಯನಪುರ ಕಣದಲ್ಲಿ ಇದ್ದಾರೆ.

ಪ್ರಸ್ತುತ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಮರಿತಿಬ್ಬೇಗೌಡ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮರಿತಿಬ್ಬೇಗೌಡರ ಪ್ರಭಾವ ಹೆಚ್ಚಿದ್ದು, ಸತತ ನಾಲ್ಕು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಮರಿತಿಬ್ಬೇಗೌಡ ಮೊದಲ ಬಾರಿಗೆ 2000ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಪರಿಷತ್‌ಗೆ ಆಯ್ಕೆಗೊಂಡರು. ಆ ನಂತರ 2006ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ 2012 ಹಾಗೂ 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಯಬೇರಿ ಬಾರಿಸಿದ್ದರು. ಇದೀಗ ಮರಳಿ ಕಾಂಗ್ರೆಸ್‌ಗೆ ಆಗಮಿಸಿದ ಮರಿತಿಬ್ಬೇಗೌಡ ಸತತ 5ನೇ ಗೆಲುವಿನ ಕಾತರದಲ್ಲಿ ಇದ್ದಾರೆ. ಇವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಈ ಬಾರಿ ಜೆಡಿಎಸ್‌ನ ಕೆ. ವಿವೇಕಾನಂದ ಪ್ರಬಲ ಸ್ಪರ್ಧೆ ಒಡ್ಡಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ. ವಿವೇಕಾನಂದ ಇದೇ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪ್ರಬಲವಾಗಿದ್ದು, ಈ ಎರಡು ಪಕ್ಷಗಳನ್ನು ಬೆಂಬಲಿಸುವ ಶಿಕ್ಷಕ ವರ್ಗದವರ ಮತಗಳು ಒಗ್ಗೂಡಿದರೆ ಗೆಲುವು ಕಷ್ಟವೇನು ಅಲ್ಲ ಎಂಬುದು ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಕಣದಲ್ಲಿ ಮಾಜಿ ಶಾಸಕ ವಾಟಾಳ್ ನಾಗರಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಈ ಬಾರಿ ಎಷ್ಟು ಮತಗಳನ್ನು ಸೆಳೆಯುತ್ತಾರೆ ಎಂಬ ಕುತೂಹಲ ಇದೆ.

4 ಕ್ಷೇತ್ರಗಳ ಮತ ಎಣಿಕೆ
ನಗರದ ಜೆಎಲ್‌ಬಿ ರಸ್ತೆಯ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಜತೆಗೆ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.
ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಪ್ರಾರಂಭಗೊಳ್ಳಲಿದ್ದು, ಪ್ರತಿ ಕ್ಷೇತ್ರಗಳಿಗೆ 14 ಮೇಜುಗಳು ಮತ್ತು ಒಂದು ಚುನಾವಣಾ ಧಿಕಾರಿ ಟೇಬಲ್ ಅಳವಡಿಸಲಾಗಿದೆ. ಪ್ರತಿ ಮೇಜಿಗೆ ಒಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರು ಇರಲಿದ್ದಾರೆ. ಪ್ರತಿ ಮೇಜಿಗೆ ಒಬ್ಬರಂತೆ ಅಭ್ಯರ್ಥಿಗಳ ಪರವಾಗಿ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. 2 ಎಸಿಪಿ, 5 ಪಿಐ, 9 ಪಿಎಸ್‌ಐ, 13 ಎಎಸ್‌ಐ, 60 ಪೇದೆಗಳನ್ನು ನಿಯೋಜಿಸಲಾಗಿದೆ.

ಶೇ.88.07 ರಷ್ಟು ಮತದಾನ
ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.88.07ರಷ್ಟು ಮತದಾನವಾಗಿದೆ. 21,549 ಮತದಾರರ ಪೈಕಿ 18,979 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 11,998 ಪುರುಷ ಮತದಾರರ ಪೈಕಿ 10,894 ಪುರುಷರು (ಶೇ.90.80), 9,550 ಮಹಿಳಾ ಮತದಾರರಲ್ಲಿ 8,085 ಮಹಿಳೆಯರು (ಶೇ.84.66) ಮತದಾನ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಧಿಕ (ಶೇ.92.25), ಮೈಸೂರು ಜಿಲ್ಲೆಯಲ್ಲಿ ಕಡಿಮೆ (ಶೇ.84.07) ಮತದಾನವಾಗಿದೆ. ಉಳಿದಂತೆ ಹಾಸನ ಜಿಲ್ಲೆಯಲ್ಲಿ ಶೇ.91.95, ಮಂಡ್ಯದಲ್ಲಿ ಶೇ.91.60 ಮತದಾನವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 2,181 ಮತದಾರರ ಪೈಕಿ 2,012 ಮತದಾರರು ಹಕ್ಕು ಚಲಾಯಿಸಿದರು. ಹಾಸನ ಜಿಲ್ಲೆಯಲ್ಲಿ 3,526 ಮತದಾರರ ಪೈಕಿ 3,242, ಮಂಡ್ಯ ಜಿಲ್ಲೆಯಲ್ಲಿ 5,403 ಮತದಾರರ ಪೈಕಿ 4,949, ಮೈಸೂರು ಜಿಲ್ಲೆಯಲ್ಲಿ 10,439 ಮತದಾರರ ಪೈಕಿ 8,776 ಮತದಾರರು ಮತದಾನ ಮಾಡಿದ್ದಾರೆ.

ನೈಋತ್ಯ ಪದವೀಧರರ ಕ್ಷೇತ್ರ: ಬಿಜೆಪಿಗೆ ಬಂಡಾಯ ಬಿಸಿ

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಇದ್ದು, ಇದು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಕುತೂಹಲ ಇದೆ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಸ್ಪರ್ಧಿಸಿದ್ದಾರೆ. ಮಾಜಿ ಶಾಸಕ ಕೆ.ರಘುಪತಿ ಭಟ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಉಳಿದಂತೆ ಸರ್ವ ಜನತಾ ಪಕ್ಷದ ಚನ್ನಗಿರಿ ತಾಲೂಕಿನ ಜಿ.ಸಿ.ಪಟೇಲ್, ಪಕ್ಷೇತರ ಅಭ್ಯರ್ಥಿಯಾಗಿ ದಿನಕರ್ ಉಳ್ಳಾಲ್, ಶಿವಮೊಗ್ಗದ ಎಸ್.ಪಿ.ದಿನೇಶ್, ಬಂಟ್ವಾಳದ ಬಿ.ಮಹಮ್ಮದ್ ತುಂಬೆ, ಮಂಗಳೂರಿನ ಡಾ.ಶೇಖ್ ಬಾವಾ ಮಂಗಳೂರು, ಶಿವಮೊಗ್ಗದ ಜಿ.ಆರ್.ಷಡಾಕ್ಷರಪ್ಪ, ಷಹರಾಜ್ ಮಜಾಹಿದ್ ಸಿದ್ದಕ್ಕಿ ಕಣದಲ್ಲಿದ್ದಾರೆ.

ಕೈ-ದಳದ ನಡುವೆ ಫೈಟ್

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಹಾಲಿ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಮತ್ತು ಕಾಂಗ್ರೆಸ್‌ನ ಕೆ.ಕೆ.ಮಂಜುನಾಥ್ ಕುಮಾರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪಕ್ಷೇತರ ಅಭ್ಯರ್ಥಿಗಳಾದ ತೀರ್ಥಹಳ್ಳಿ ತಾಲೂಕಿನ ಡಾ.ಅರುಣ್ ಹೊಸಕೊಪ್ಪ, ಉಡುಪಿಯ ನರೇಶ್ ಹೆಗ್ಡೆ, ಚಿಕ್ಕಮಗಳೂರಿನ ಬಿ.ಆರ್.ನಂಜೇಶ್, ಕೆ.ಕೆ.ಮಂಜುನಾಥ್, ಕುಂದಾಪುರ ತಾಲೂಕಿನ ಟಿ.ಭಾಸ್ಕರ್ ಶೆಟ್ಟಿ, ಮಂಗಳೂರಿನ ಡಾ.ಎಸ್.ಆರ್.ಹರೀಶ್ ಆಚಾರ್ಯ ಅಖಾಡದಲ್ಲಿದ್ದಾರೆ.