ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಮಲ ಅರಳಿದೆ. ರಾಜಕೀಯಕ್ಕೆ ಹೊಸಬರಾದರೂ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ 757 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಸಾಕಷ್ಟು ಪೈಪೋಟಿ ನೀಡಿದರೂ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಹೀನಾಯ ಸೋಲು ಕಂಡಿದ್ದಾರೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮತ ಎಣಿಕೆಯಲ್ಲಿ ಕೆ.ಸಿ.ಕೊಂಡಯ್ಯ 1902, ವೈ.ಎಂ.ಸತೀಶ 2659 ಮತ ಪಡೆದರೆ, ಪಕ್ಷೇತರ ಅಭ್ಯರ್ಥಿಗಳಾದ ಗಂಗೀರೆಡ್ಡಿ 4, ಮಂಜುನಾಥ 2 ವೋಟ್ ಗಳಿಸಿದ್ದಾರೆ.
ಒಟ್ಟು 4663 ಮತದಾರರ ಪೈಕಿ 4654 ಸದಸ್ಯರು ಹಕ್ಕು ಚಲಾಯಿಸಿದ್ದರು. 9 ಜನ ಮತದಾನ ಮಾಡಿಲ್ಲ. 87 ಮತಗಳು ತಿರಸ್ಕೃತವಾಗಿವೆ. 4567 ಮತಗಳು ಮಾತ್ರ ಸ್ವೀಕೃತವಾಗಿದ್ದರಿಂದ ಅಭ್ಯರ್ಥಿ ಗೆಲುವಿಗೆ 2284 ಮತಗಳು ಅವಶ್ಯವಿತ್ತು. ಆದರೆ, ಬಿಜೆಪಿ ಅಭ್ಯರ್ಥಿ 2659 ಮತ ಪಡೆದಿದ್ದರಿಂದ ಮೊದಲ ಪ್ರಾಶಸ್ತ್ಯದ ಮತ ಪರಿಗಣಿಸಿ, ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ವೈ.ಎಂ.ಸತೀಶಗೆ ಪ್ರಮಾಣ ಪತ್ರ ನೀಡಿದರು.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ, ಅಂದು ಬೆಳ್ಳಂಬೆಳಗ್ಗೆಯೇ ಮತಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಅಲ್ಲದೆ, ವಿಜಯಶಾಲಿಯಾಗಿದ್ದರು. ಆದರೆ, ಈ ಬಾರಿ ಮತದಾನದ ದಿನದ ಹಿಂದಿನ ದಿನ ನಡೆದ ರಾಜಕೀಯ ಚದುರಂಗದ ಆಟದ ಮರ್ಮದಿಂದ ಸೋಲಿನ ಲೆಕ್ಕಾಚಾರ ಅರಿತಿದ್ದ ಕೊಂಡಯ್ಯ, ಮಂಗಳವಾರ ಮತ ಎಣಿಕೆ ಕೇಂದ್ರದತ್ತ ಆಗಮಿಸಲಿಲ್ಲ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ, ಎಣಿಕೆಗೂ ಮುನ್ನವೇ ಗೆಲುವಿನ ನಗೆ ಬೀರುತ್ತ ಎಲ್ಲರೊಂದಿಗೆ ಉತ್ಸಾಹದಿಂದ ಮಾತನಾಡುತ್ತಿದ್ದರು.
ಮತ ಎಣಿಕೆ ಕಾರ್ಯದಲ್ಲಿ 70 ಸಿಬ್ಬಂದಿ ಭಾಗವಹಿಸಿದ್ದರು. ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಆರಂಭವಾಗಿದ್ದರೂ ಮೊದಲು, ಆಯಾ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಎರಡು ಕೋಣೆಯ 10 ಕೌಂಟರ್‌ನಲ್ಲಿದ್ದ ಎಲ್ಲ ಮತಪತ್ರಗಳನ್ನು ಮೂರ‌್ನಾಲ್ಕು ಬಾರಿ ಮಿಕ್ಸ್ ಮಾಡಲಾಯಿತು. ನಂತರ ಎಣಿಕೆ ಪ್ರಾರಂಭಿಸಲಾಯಿತು. 11ಗಂಟೆ ವೇಳೆಗೆ ಗೆಲುವಿನ ಚಿತ್ರಣ ಹೊರಬಿತ್ತು.