ಜಿಲ್ಲೆ

ಭರವಸೆಯ ಗ್ಯಾರಂಟಿ ಸರ್ಕಾರ ನಮ್ಮದು: ಎಂಎಲ್‌ಸಿ ದಿನೇಶ್ ಗೂಳಿಗೌಡ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ. ಮಾತಿಗೆ ಬದ್ಧವಾಗಿರುವ ಪಕ್ಷ ನಮ್ಮದಾಗಿದ್ದರಿಂದ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿದ್ದೆವು. ಈಗ ಅದರಂತೆಯೇ ನಡೆದುಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಐದು ಗ್ಯಾರಂಟಿ ಭರವಸೆಗಳನ್ನು ಕೊಟ್ಟಿದ್ದಲ್ಲದೆ, ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ಇವುಗಳನ್ನು ಈಡೇರಿಸುವುದಾಗಿ ನಮ್ಮ ಪಕ್ಷದ ನಾಯಕರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಈಗ ಅದರಂತೆಯೇ ನಡೆದುಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಸೇರಿದಂತೆ 8 ಮಂದಿ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲಿ 5 ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ರಾಜ್ಯದ ಜನತೆಗೆ ನೀಡಿದ್ದ ವಾಗ್ದಾನವನ್ನು ಈಡೇರಿಸಿದ್ದಾರೆ. ಇದು ಅಭಿನಂದನಾರ್ಹವಾಗಿದೆ. ಎಷ್ಟೇ ಆರ್ಥಿಕ ಹೊರೆ ಬಂದರೂ ಕೂಡಾ ನಿವಾರಣೆ ಮಾಡಿಕೊಂಡು, ರಾಜ್ಯದ ಜನರ ಅಭ್ಯುದಯಕ್ಕಾಗಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.