ಜಿಲ್ಲೆ

ವನ್ಯಜೀವಿ ಕಾಯ್ದೆ ತಿದ್ದುಪಡಿ ಮಾಡಿ: ಎಂಎಲ್‌ಸಿ ದಿನೇಶ್ ಗೂಳಿಗೌಡ ಸಲಹೆ

reportermys

ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ಹಾನಿ ಮಾಡುತ್ತಿದೆ. ಇದು ರೈತರಿಗೆ ದೊಡ್ಡ ತಲೆನೋವು ತರಿಸಿದೆ. ಈ ಹಿನ್ನೆಲೆಯಲ್ಲಿ ಕಾಡು ಹಂದಿಗಳ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ವನ್ಯಜೀವಿ(ಸಂರಕ್ಷಣಾ) ಕಾಯ್ದೆಯನ್ನು ತಿದ್ದುಪಡಿ ಮಾಡಿ ಕಾನೂನಿನಲ್ಲಿ ಸಡಿಲಿಕೆ ಮಾಡುವ ಮೂಲಕ ಬೇಟೆಗಾರರು ಹಂದಿಯನ್ನು ಬೇಟೆಯಾಡಲು ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಎಂಎಲ್‌ಸಿ, ಮೊದಲೇ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇತ್ತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ವೈಜ್ಞಾನಿಕ ಬೆಲೆ ಇನ್ನೂ ನಿಗದಿಯಾಗಿಲ್ಲ. ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ ಪರಿಶ್ರಮ ಪಟ್ಟು ಬೆಳೆ ಬೆಳೆದರೆ ಅವುಗಳೂ ಕಾಡುಪ್ರಾಣಿಗಳ ಪಾಲುಗುತ್ತಿವೆ. ಆದ್ದರಿಂದ ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.

ಪತ್ರದಲ್ಲೇನಿದೆ?: ಕಾಡು ಹಂದಿಗಳು ಕಬ್ಬು ಹಾಗೂ ತೆಂಗಿನ ಸಸಿಗಳ ಕಾಂಡಗಳನ್ನು ಬಗೆದು ತಿಂದು ಹಾಕಿರುವ ಪ್ರಕರಣ ಹೆಚ್ಚಾಗಿವೆ. ಇದರಿಂದಾಗಿ ರೈತರು ಹೈರಾಣಾಗಿದ್ದಾರೆ. ಶ್ರಮದಾಯಕವಾಗಿ ಬೆಳೆ ಬೆಳೆಸುವುದರ ಜತೆಗೆ ಅವುಗಳನ್ನು ರಕ್ಷಣೆ ಮಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿದೆ. ರಾತ್ರಿ ವೇಳೆ ಕಾಡು ಹಂದಿಗಳು ಹಿಂಡು ಹಿಂಡಾಗಿ ರೈತರ ಹೊಲ-ಗದ್ದೆಗಳಲ್ಲಿ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ನಿಯಂತ್ರಣವನ್ನು ರೈತರೇ ಮಾಡಿಕೊಳ್ಳಬಹುದೇ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ. ಪರವಾನಗಿ ಹೊಂದಿರುವ ಬಂದೂಕಿನಿಂದ ರೈತರು ಕಾಡು ಹಂದಿಗಳ ಮೇಲೆ ಗುಂಡು ಹಾರಿಸಬಹುದಾಗಿದ್ದರೂ ಕೊಂದ ಅಥವಾ ಸೆರೆ ಹಿಡಿದ ಹಂದಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಅರಣ್ಯ ಇಲಾಖೆ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕಿದೆ. ಆದರೆ, ಈಗ ಯಾವ ರೀತಿಯಾಗುತ್ತಿದೆ ಎಂದರೆ ರೈತರಿಗೆ ಇದರ ಅರಿವು ಇರುವುದಿಲ್ಲ. ಹೀಗಾಗಿ ರೈತರು ಕಾಡು ಹಂದಿಗಳನ್ನು ಹಿಡಿದರೆ, ಇಲ್ಲವೇ ಗುಂಡು ಹೊಡೆದು ಸಾಯಿಸಿದರೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯು ದಂಡ ಹಾಕುತ್ತೇವೆ ಎಂದು ರೈತರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಾರೆಂಬ ದೂರುಗಳು ಕೇಳಿಬಂದಿವೆ. ಇಂತಹ ಸುಲಿಗೆ ನಿಲ್ಲಬೇಕು ಎಂದಿದ್ದಾರೆ.

ಜತೆಗೆ ಈಗಿರುವ ಕಾನೂನಿನಲ್ಲಿಯೂ ಸ್ವಲ್ಪ ಮಾರ್ಪಾಡನ್ನು ಮಾಡಬೇಕು. ಕಾರಣ ಎಲ್ಲ ರೈತರು ಬಂದೂಕುಗಳನ್ನು ಕೊಂಡುಕೊಳ್ಳಲು ಶಕ್ತರಾಗಿರುವುದಿಲ್ಲ. ಜತೆಗೆ ಪರವಾನಗಿಯೂ ಅಷ್ಟು ಸುಲಭವಾಗಿ ಲಭಿಸುವುದಿಲ್ಲ. ಅದಕ್ಕಾಗಿ ಬೇಟೆಗಾರರಿಗೆ ಇಂತಹ ಕಾಡುಹಂದಿಯನ್ನು ಹೊಡೆಯಲು ಅನುಮತಿಯನ್ನು ತಾವುಗಳು ನೀಡಬೇಕು. ಇದರಿಂದ ರೈತರ ಜಮೀನುಗಳಿಗೆ ಕಾಡು ಹಂದಿಗಳು ನುಗ್ಗಿ ಉಪಟಳ ಮಾಡುವುದು ಕಡಿಮೆಯಾಗುತ್ತದೆ. ಅಲ್ಲದೆ, ಕಾಡು ಹಂದಿಗಳನ್ನು ಕೊಲ್ಲಲು ಕೆಲವು ಉಪ ನಿಯಮಗಳನ್ನೂ ವಿಧಿಸಲಾಗಿದೆ. ಆದ್ದರಿಂದ ಕಾನೂನನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಬದಲಾಯಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿದ್ದು, ಮುಂದಿನ ಅಧಿವೇಶನದಲ್ಲಿ ರೈತರ ಈ ಸಮಸ್ಯೆ ಬಗ್ಗೆ ಚರ್ಚೆಗ ನಡೆಸುವಂತೆ ಮನವಿ ಮಾಡಿದ್ದಾರೆ.