ಜಿಲ್ಲೆ

ಅಪಘಾತದಲ್ಲಿ ಎಂಎಲ್ಸಿ ಅರಳಿ ತಾಯಿ ಸಾವು

ಕಲಬುರಗಿ: ಸೇಡಂ ರಿಂಗ್ ರಸ್ತೆಯ ಟೊಯೊಟಾ ಶೋರೂಂ ಬಳಿ ಬುಧವಾರ ಸಂಜೆ ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರ ತಾಯಿ ಸುಮಿತ್ರಾಬಾಯಿ ಶಾಮರಾವ ಅರಳಿ(೭೫) ಮೃತಪಟ್ಟಿದ್ದಾರೆ. ಬಡೇಪುರ ಕಾಲನಿಯಲ್ಲಿರುವ ಪುತ್ರಿ ಶೀಲಾದೇವಿ ಲಿಂಗರಾಜ ಅರಸ ಮನೆಯಲ್ಲಿ ಇರುತ್ತಿದ್ದರು. ಸಂಜೆ ಕೆಲಸದ ನಿಮಿತ್ತ ರಸ್ತೆ ದಾಟುವಾಗ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಇನ್‌ಸ್ಪೆಕ್ಟರ್ ಖಾಜಾ ಹುಸೇನಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ. ಪುತ್ರರಾದ ಎಂಎಲ್ಸಿ ಅರಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಡಾ.ಗೌತಮ ಅರಳಿ, ಸೂರ್ಯಕಾಂತ ಅರಳಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ ೩ಕ್ಕೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಬಿ) ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದ ಎಂಎಲ್‌ಸಿ ಅರಳಿ ಸುದ್ದಿ ತಿಳಿಯುತ್ತಲೇ ಕಲಬುರಗಿಗೆ ದೌಡಾಯಿಸಿದ್ದಾರೆ.