ಹೊಸಕೋಟೆ ತಾಲೂಕಿನ ನಾಗನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ಬಮುಲ್ ನಿರ್ದೇಶಕ ಕೆಎಂಎಂ ಮಂಜುನಾಥ್, ಮುತ್ತಸಂದ್ರ ಗ್ರಾಪಂ ಅಧ್ಯಕ್ಷೆ ರೂಪಾ ಮುನಿಕೃಷ್ಣಪ್ಪ, ಡೇರಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಇತರರು ಇದ್ದರು. 
ಜಿಲ್ಲೆ

ಭ್ರಷ್ಟಾಚಾರದಲ್ಲಿ ಮುಳಿಗಿದ ಸರ್ಕಾರ: ಶಾಸಕ ಶರತ್ ಬಚ್ಚೇಗೌಡ ಆರೋಪ

Bengaluru Rural

ಹೊಸಕೋಟೆ: ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಮತದಾರರಿಗೆ ಆಶ್ವಾಸನೆ ನೀಡಿದ ಬಿಜೆಪಿ ಸರ್ಕಾರ ಈಗ ಶೇ. 40 ಕಮಿಷನ್ ಜತೆಗೆ ನೇಮಕಾತಿ ಹಗರಣ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ದೂರಿದರು.


ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ನಾಗನಾಯಕನಕೋಟೆ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಹಾಗೂ ಬಮುಲ್ ಸಹಯೋಗದಲ್ಲಿ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಕರೊನಾ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ಹಾಲು ಒಕ್ಕೂಟ. ತಾಲೂಕಿನ ಪ್ರತಿ ಗ್ರಾಮಕ್ಕೂ ಕ್ರಿಮಿನಾಶಕ ಸಿಂಪಡಣೆ, ಉಚಿತ ಕರೊನಾ ನಿರ್ಮೂಲನಾ ಲಸಿಕೆ ಒದಗಿಸಿತು. ಅನುಗೊಂಡನಹಳ್ಳಿ ಹೋಬಳಿಯ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ ರಾಜ್ಯ ಸರ್ಕಾರ, ಅರ್ಹತೆ ಇಲ್ಲದವರಿಂದ ಲಕ್ಷ ಲಕ್ಷ ಹಣ ಪಡೆದು ಪಿಎಸ್‌ಐ ಹಾಗೂ ಇನ್ನಿತರ ಸರ್ಕಾರಿ ಹುದ್ದೆ ನೀಡಲು ಮುಂದಾಗುವ ಮೂಲಕ ಭ್ರಷ್ಟಾಚಾರಕ್ಕೆ ಮುಂದಾಗಿದೆ ಎಂದರು.
ಬಮುಲ್ ನಿರ್ದೇಶಕ ಕೆಎಂಎಂ ಮಂಜುನಾಥ್ ಮಾತನಾಡಿ, 28 ವರ್ಷಗಳಿಂದ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರದಿಂದ ಡೇರಿ ನಡೆಯುತ್ತಿದ್ದು, ಹೈನುಗಾರಿಕೆ ಈ ಭಾಗದ ರೈತರ ಆರ್ಥಿಕ ಶಕ್ತಿಯಾಗಿದೆ ಎಂದರು.


ಕರೊನಾ ಸಂದರ್ಭದಲ್ಲೂ ಹಾಲಿನ ಖರೀದಿಸಿ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲಾಗಿತ್ತು. ಮುಂದೆಯೂ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯ ಒದಗಿಸಲು ಬದ್ಧ ಎಂದರು.


ನಾಗನಾಯಕನ ಕೋಟೆ ಮುಖಂಡರು ಶಾಸಕರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು.
ಮುಖಂಡರಾದ ಬೋಧನಹೊಸಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಬು ರೆಡ್ಡಿ, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅರೇಹಳ್ಳಿ ದೇವರಾಜ್, ಲಕ್ಷ್ಮಣ್ ಸಿಂಗ್, ವಕೀಲ ರಾಧಾಕೃಷ್ಣ ಇತರರು ಇದ್ದರು.


ಬಿಜೆಪಿ ಬಡವರ ವಿರೋಧಿ: ಬಿಜೆಪಿ ಸರ್ಕಾರ ಮುಸ್ಲಿಂ ವಿರೋಧಿಯಾಗಿರುವ ಜತೆಗೆ ರಾಷ್ಟ್ರ ಕವಿ ಕುವೆಂಪು, ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಗಂಗಾ ಕಲ್ಯಾಣ ಯೋಜನೆಯಲ್ಲಿ ಪ್ರತಿ ತಾಲೂಕಿಗೆ ಸುಮಾರು 80 ರಿಂದ 100 ಕೊಳವೆಬಾವಿ ನೀಡಿದ್ದರು. ಈಗಿನ ಸರ್ಕಾರದಲ್ಲಿ ಪ್ರತಿ ಶಾಸಕರಿಗೆ ಕೇವಲ 6 ಕೊಳವೆಬಾವಿ ಕೊರೆಸುವ ಯೋಜನೆ ಜತೆಗೆ ಅಂಬೇಡ್ಕರ್ ನಿಗಮ ಹಾಗೂ ಬಾಬು ಜಗಜೀವನರಾಮ್ ನಿಗಮಗಳ ಮೂಲಕ ಒಟ್ಟು 10 ಕೊಳವೆಬಾವಿ ಕೊರೆಸಲು ಮಾತ್ರ ಅವಕಾಶ ನೀಡಿದ್ದು, ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಶರತ್ ಬಚ್ಚೇಗೌಡ ಬೇಸರಿಸಿದರು.


ಅಭಿವೃದ್ಧಿ ವಿಚಾರ ಮುಚ್ಚಿಹಾಕಲು ತಾಲೂಕಿನಲ್ಲಿ ಸಮುದಾಯಗಳ ಖರೀದಿ ಜೋರಾಗಿದೆ. ಪ್ರತಿ ಸಮುದಾಯಕ್ಕೆ 4 ಎಕರೆ ಭೂಮಿ ಹಾಗೂ 50 ಲಕ್ಷ ರೂ. ನೀಡುವ ಮೂಲಕ ಮುಂದಿನ ಚುನಾವಣೆಗೆ ತಯಾರಿ ನೆಡೆಸುವ ಮೂಲಕ ರಾಜಕಾರಣದ ಭ್ರಷ್ಟತೆಯ ಅನಾವರಣ ಮಾಡಲಾಗುತ್ತಿದೆ ಎಂದರು.