ಶಿವಮೊಗ್ಗದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. 
ಜಿಲ್ಲೆ

ತನಿಖೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ: ಬೇಳೂರು

ನವೀನ ಬಿ.ಎಂ

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ ಮತ್ತು ಸಾಗರದಲ್ಲಿ ಶಾಹಿ ಗಾರ್ಮೆಂಟ್ಸ್‌ಗೆ 285 ಎಕರೆ ಜಮೀನು ಮಂಜೂರು ಮಾಡಿರುವ ಬಗ್ಗೆ ತನಿಖೆ ಮಾಡಿಸುವವರೆಗೂ ಬಿಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ತನಿಖೆಗೆ ಸಮ್ಮತಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಸಾವಿರ ರೂ.ನಂತೆ 285 ಎಕರೆ ಜಮೀನಿನನ್ನು ಗಾರ್ಮೆಂಟ್ಸ್‌ಗೆ ಕೊಡಲಾಗಿದೆ. ಭ್ರಷ್ಟಾಚಾರ ನಡೆದಿರುವ ಶಂಕೆ ಇದ್ದು, ಚುನಾವಣೆ ಮುಗಿಯುತ್ತಿದ್ದಂತೆ ಸಮಗ್ರ ತನಿಖೆಗೆ ಒಳಪಡಿಸಿ ಹೆಚ್ಚುವರಿ ಜಮೀನು ಹಿಂಪಡೆಯಬೇಕು. ಅಲ್ಲಿವರೆಗೂ ಹೋರಾಟ ನಿಲ್ಲಿಸುವುದಿಲ್ಲ. ವಿಧಾನಸೌಧದಲ್ಲೂ ಹೋರಾಟ ಮಾಡುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ ನಡೆದಿದೆ. 85 ಹುದ್ದೆಗಳಿಗೆ 40 ಲಕ್ಷ ರೂ. ಪಡೆಯಲಾಗಿದೆ. ಕೆಲವರಿಗೆ ಬ್ಯಾಂಕ್‌ನಿಂದ ಲೋನ್ ಕೂಡ ಮಾಡಿಸಿಕೊಟ್ಟಿದ್ದು, ಈ ಬಗ್ಗೆಯೂ ತನಿಖೆ ಆಗುವವರೆಗೂ ಸುಮ್ಮನೆ ಬಿಡುವುದಿಲ್ಲ ಎಂದರು.
ಬಿಜೆಪಿ 28 ಸೀಟು ಗೆದ್ದರೆ ರಾಜಕೀಯ ನಿವೃತ್ತಿ:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಾಂಗ್ರೆಸ್ ನಿಷ್ಕ್ರಿಯ ಪಕ್ಷವೆಂದು ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಪಕ್ಷ ಬಲಿಷ್ಠವಾಗಿದೆ ಎಂಬುದು ಅವರಿಗೆ ಗೊತ್ತಿಲ್ಲ. ಬಿಜೆಪಿ 28ಕ್ಕೆ 28 ಸೀಟು ಗೆಲ್ಲುತ್ತದೆ ಎಂದು ಹೇಳಿದ್ದು, ರಾಜ್ಯದಲ್ಲಿ ಬಿಜೆಪಿ 28 ಸೀಟು ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವರು. ಸಂಸದ ಬಿ.ವೈ.ರಾಘವೇಂದ್ರ ಅವರು ತನಗೆ ಮತ ಕೊಡಿ ಎಂದು ಎಲ್ಲಿಯೂ ಕೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಕೊಡುವಂತೆ ಕೇಳಿದ್ದಾರೆ. ಏಕೆಂದರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ ಎಂಬುದು ರಾಘವೇಂದ್ರ ಅವರಿಗೆ ಗೊತ್ತಿದೆ. ಮತದಾರರು ಗೀತಾ ಅವರನ್ನು ಬೆಂಬಲಿಸಿದ್ದಾರೆ ಎಂದರು.