ಜಿಲ್ಲೆ

ತಮಿಳು ಕಾಲನಿ ನಿವಾಸಿಗಳ ಜತೆಗೆ ಬಲಾಢ್ಯರ ಕಟ್ಟಡವನ್ನು ತೆರವುಗೊಳಿಸಿ: ಮಿಮ್ಸ್ ಜಾಗ ವಿವಾದಕ್ಕೆ ಶಾಸಕ ರವಿಕುಮಾರ್ ಗಣಿಗ ಸ್ಪಷ್ಟನೆ

ಮಂಡ್ಯ: ಹಾಲಿ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲನಿ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ಸಂಪೂರ್ಣ ಬದ್ಧನಿದ್ದೇನೆ. ಆದರೆ, ಬಲಾಢ್ಯರು, ಪ್ರಭಾವಿಗಳು ನಿರ್ಮಿಸಿಕೊಂಡಿರುವ ಅಕ್ರಮವಾಗಿ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಮೈಸೂರು ಹಾಗೂ ಮಂಡ್ಯ ಶಾಖೆಯಿಂದ ಆಯೋಜಿಸಿದ್ದ ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೇವಲ ಬಡವರ ಮೇಲಷ್ಟೇ ಗದಾಪ್ರಹಾರ ನಡೆಸಬಾರದು. ತಮಿಳು ಕಾಲನಿ ನಿವಾಸಿಗಳಿಗೆ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಅಲ್ಲಿ ಸರಿಯಾದ ಸೌಲಭ್ಯಗಳನ್ನು ದೊರಕಿಸಿಕೊಟ್ಟಿಲ್ಲ. ಆದ್ದರಿಂದ ಸೌಲಭ್ಯಗಳನ್ನೇ ಒದಗಿಸದೆ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ನಾನು ಬಿಡುವುದೂ ಇಲ್ಲ. ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟ ನಂತರ ಖಾಲಿ ಮಾಡಿಸುವ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುವ ಭರವಸೆ ನೀಡುತ್ತೇನೆ. ತಮಿಳು ಕಾಲನಿ ಜಾಗವೆಂದರೆ ನಿವಾಸಿಗಳ ಗುಡಿಸಲು ಮತ್ತು ಮನೆಗಳನ್ನು ತೆರವುಗೊಳಿಸುವುದಷ್ಟೇ ಜಿಲ್ಲಾಡಳಿತ ಆಸಕ್ತಿ ವಹಿಸದೆ, ಆ ಜಾಗದಲ್ಲಿ ಪ್ರಭಾವಿಗಳು ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕರೊನಾ ಸಮಯದಲ್ಲಿ ವೈದ್ಯರು ನೀಡಿದ ಸೇವೆ ಅನನ್ಯ ಮತ್ತು ಅವಿಸ್ಮರಣೀಯ. ಆ ಸಮಯದಲ್ಲಿ ಜೀವ ಉಳಿಸುವ ವೈದ್ಯರ ಮಹತ್ವ ಎಷ್ಟು ಎನ್ನುವುದು ವಿಶ್ವಕ್ಕೇ ಗೊತ್ತಾಯಿತು. ವೈದ್ಯರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದರು. ರೋಗಿಗಳ ಪಾಲಿಗೆ ದೈವಸ್ವರೂಪಿಯಾಗಿ ಕಂಡರು. ಅಂತಹ ವೈದ್ಯರ ಸೇವೆಯನ್ನು ಗುರುತಿಸಿ ಶ್ಲಾಸುತ್ತಿರುವುದು ಅಭಿನಂದನೀಯ ಎಂದರು.