ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ನಿರಂಜನಕುಮಾರ್. ಮಾತನಾಡಿದರು. ಮಹದೇವಪ್ರಸಾದ್, ಸುರೇಶ್, ಮಲ್ಲೇಶ್, ನಾಗೇಶ್ ಇದ್ದರು. 
ಜಿಲ್ಲೆ

ಕೆರೆಗಳಿಗೆ ನೀರು ತುಂಬಿಸಲು ಶಾಸಕರ ನಿರ್ಲಕ್ಷ್ಯ

ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಶಾಸಕ ಗಣೇಶ್‌ಪ್ರಸಾದ್ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬರಪೀಡಿತ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದರು. ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ಅಭಾವದಿಂದ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತವಾಗಿದೆ. ಸಾಲ ಮಾಡಿ ಬೆಳೆದ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ನೀರು ಸಿಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಶಾಸಕರು ತಮ್ಮ ಜವಾಬ್ದಾರಿ ಮರೆತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಜೂನ್ ತಿಂಗಳಿನಿಂದಲೇ ಕೆರೆಗಳನ್ನು ತುಂಬಿಸಲು ಮೋಟಾರ್ ಚಾಲನೆ ಮಾಡಲಾಗುತ್ತಿತ್ತು. ಆದರೀಗ ಅಕ್ಟೋಬರ್ ಅಂತ್ಯವಾದರೂ ಮೋಟಾರು ಚಾಲನೆ ಮಾಡಿಲ್ಲ. ರಿಪೇರಿ ನೆಪದಲ್ಲಿ ಶಾಸಕರು ದೊಡ್ಡ ಡ್ರಾಮಾ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಬೊಮ್ಮಲಾಪುರದಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಮೇಲೆ ಪರಸ್ಪರ ಪ್ರಕರಣ ದಾಖಲಾಗಿದ್ದು, ಸಮಸ್ಯೆಯನ್ನು ಬಗೆಹರಿಸಲು ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಶಾಸಕರು ರೈತರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್ ಸುರೇಶ್, ಎನ್ ಮಲ್ಲೇಶ್, ಪುರಸಭೆ ಸದಸ್ಯ ನಾಗೇಶ್ ಇದ್ದರು.