ರಾಯಚೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ನೇತೃತ್ವದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸ್ವಪಕ್ಷದ ಶಾಸಕರೇ ಸಚಿವರ ವಿರುದ್ಧ ಗುಡುಗಿದ್ದರಿಂದ ಸಭೆ ಗೊಂದಲ ಗೂಡಾಗಲು ಕಾರಣವಾಯಿತು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಸಿ ಸಭೆಯಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ಸಚಿವರು ಜಿಲ್ಲಾಯ ಶಾಸಕರಿಗೆ ಸಭೆಗಳಲ್ಲಿ ಗೌರವ ತೋರುತ್ತಿಲ್ಲ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಬೆಲೆ ಇಲ್ಲಂತಾಗಿದೆ. ಉಸ್ತುವಾರಿ ಸಚಿವರು ಆರು ತಿಂಗಳಿಗೊಮ್ಮೆ ಸಭೆ ನಡೆಸಿದರೆ, ನಮ್ಮ ಸಮಸ್ಯೆ ಪರಿಹಾರ ಹೇಗೆ?. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದೀರಿ ಆದರೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ.
ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿ ರಸಗೊಬ್ಬರ ಖಾಸಗಿ ಅವರಿಗೆ ಮಾರಾಟ ಮಾಡಲಾಗುತ್ತಿದೆ. ಯಾವ ಸೊಸೈಟಿಯಲ್ಲಿ ಎಷ್ಟು ರಸಗೊಬ್ಬರ ಸಂಗ್ರಹವಿದೆ ಎನ್ನುವ ಮಾಹಿತಿ ನೀಡುತ್ತಿಲ್ಲ. ರೈತರು ನಮ್ಮ ಮನೆಗಳಿಗೆ ಬರುತ್ತಾರೆ. ಅವರಿಗೆ, ಏನು ಉತ್ತರ ನೀಡಬೇಕು. ಅಧಿಕಾರಿಗಳು ನಾಟಕ ಮಾಡುತ್ತಿದ್ದಾರೆ ಎನ್ನುವ ಕಟುವಾದ ಶಬ್ದಗಳ ಮೂಲಕ ಆಕ್ರೋಶ ವ್ಯಕ್ತಪಡಿಸಡಿದರು.
ಕಳೆದ ಎರಡು ವರ್ಷಗಳ ಸಭೆಗಳಲ್ಲಿ ಕಡಿಪಿ ಸಭೆಯಲ್ಲಿ ಗಮನಕ್ಕೆ ತಂದ ಸಮಸ್ಯೆಗಳು ಪರಿಹಾರವಾಗಿಲ್ಲ ಜಲಧಾರಿ ಯೋಜನೆ ಕೆಲಸ ಏನು ಆಗಿಲ್ಲ. ಉಸ್ತುವಾರಿ ಸಚಿವರಾದ ನೀವು ಅಧಿಕಾರಿಗಳು ಮತ್ತು ಗುತ್ತೇದಾರರ ಪರ ಮಾತನಾಡಿದರೆ ನಮ್ಮನ್ನು ಯಾರು ಕೇಳುತ್ತಾರೆ?. ಜಲಧಾರೆ ಯೊಜನೆ ಕುರಿತು ಒಂದು ವರ್ಷ ಕಳೆದರೂ ಯಾವುದೇ ಕೆಲಸವಾಗಿಲ್ಲ. ಅಧಿಕಾರಿಗಳು ಈ ರೀತಿ ಶಾಸಕರಿಗೆ ಅಪಮಾನ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್ಸಿ ಬಸನಗೌಡ ಬಾದರ್ಲಿ ಹಾಗೂ ಶಾಸಕಿ ಕರೆಮ್ಮ ನಾಯಕಿ ಜತೆಯಾಗಿ ಮಾತನಾಡಿ, ಸಿಂಧನೂರು ಹಾಗೂ ದೇವದುರ್ಗ ತಾಲೂಕಿನಲ್ಲಿ ಜಲಧಾರೆ ಯೋಜನೆ ಸಂಬಂಧಿಸಿದಂತೆ ಒಂದು ಸಭೆಯು ಮಾಡಿಲ್ಲ ಎಂದರು. ಮಾಹಿತಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಜಲಧಾರೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಈ ಸಭೆಯಿಂದ ಹೊರ ಹಾಕುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರಿಬ್ಬರ ಮಾತಿನ ಚಕಮಕಿ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕೊಡದ ರೈತರ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸುದೀರ್ಘವಾಗಿ ಮಾತನಾಡಿದರು. ಇದಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬರೀ ಒಂದೇ ವಿಷಯದ ಬಗ್ಗೆ ಎಷ್ಟೊತ್ತು ಮಾತನಾಡುವುದು, ಅಜೆಂಡಾ ಪ್ರಕಾರ ಚರ್ಚೆ ನಡೆಸಿ ಎಂದು ತಾಕೀತು ಮಾಡಿದರು.
ಇದರಿಂದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಬನನಗೌಡ ಬಾದರ್ಲಿ, ಶರಣಗೌಡ ಬಯ್ಯಪುರ ಕೂಡ ಧ್ವನಿಗೂಡಿಸಿದ್ದರಿಂದ ಕೆಲ ಕಾಲ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಕೆಳಗೆ ಕುಳಿತು ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಧರಣಿ
ಜಿಲ್ಲೆಯ ದೇವದುರ್ಗ ತಾಲೂಕಿನ ಎರಡು ಕಡೆ ಅವೈಜ್ಞಾನಿಕವಾಗಿ ಅಳವಡಿಸಿರುವ ಟೋಲ್ಗಳನ್ನು ಕೂಡಲೇ ತೆರವು ಮಾಡುವಂತೆ ಆಗ್ರಹಿಸಿ ಜೆಡಿಸ್ ಶಾಸಕಿ ಜಿ.ಕರೆಮ್ಮ ನಾಯಕ ಕೆಡಿಪಿ ಸಭೆಯಲ್ಲೇ ಧರಣಿ ನಡೆಸಿದರು.
ನನ್ನ ಕ್ಷೇತ್ರದಲ್ಲಿ ಕೇವಲ 40 ಕಿ.ಮೀ ಅಂತರದಲ್ಲಿ ಎರಡು ಟೋಲ್ಗೇಟ್ಗಳನ್ನು ಅಳವಡಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಜನರಿಗೆ ತೊಂದರೆ ಆಗುವುದನ್ನು ಪ್ರಶ್ನಿಸಿದರೆ ಈ ರೀತಿ ಮಾಡುವುದು ಖಂಡನೀಯ. ಟೋಲ್ ಬಂದ್ ಮಾಡುವವರೆಗೆ ನಾನು ಮೇಲೇಳುವುದಿಲ್ಲ ಎಂದು ಪಟ್ಟು ಹಿಡಿದರು.
ಶಾಸಕರ ಮನವೊಲಿಸಿದ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಕೊನೆಗೆ ತಾತ್ಕಾಲಿಕವಾಗಿ ಟೋಲ್ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ.,ಗೆ ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಕರೆಮ್ಮ, ನಾನು ಮರಳಿ ಹೋಗುವುದರೊಳಗೆ ಟೋಲ್ ಬಂದ್ ಆಗಿರಬೇಕು. ಇಲ್ಲವಾದರೆ ರಸ್ತೆಯಲ್ಲೇ ಧರಣಿ ಮಾಡುವುದಾಗಿ ಎಚ್ಚರಿಸಿದರು.