ಜಿಲ್ಲೆ

ಡಿಸಿಸಿ ಬ್ಯಾಂಕ್​ ಮೇಲೆ ಶಾಸಕರ ಕಣ್ಣು

ಕೋಲಾರ ಡೆಸ್ಕ್

ಕೋಲಾರ: ಕಾಂಗ್ರೆಸ್​ ಮುಖಂಡರ ನಡುವಿನ ಭಿನ್ನಮತದಿಂದ 2 ವರ್ಷಗಳಿಂದ ಬ್ಯಾಂಕಿಗೆ ಆಡಳಿತ ಮಂಡಳಿ ಇಲ್ಲದೆ ಗರ ಬಡಿದಂತಾಗಿದ್ದ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಯ 18 ಸ್ಥಾನಗಳಿಗೆ ಮೇ 28ರಂದು ಚುನಾವಣೆ ನಿಗದಿಯಾದ ಬೆನ್ನಲ್ಲೇ ನಿರ್ದೇಶಕರಾಗಿ ಆಯ್ಕೆಯಾಗಲು ಎರಡೂ ಜಿಲ್ಲೆಗಳ ಶಾಸಕರು ಕಸರತ್ತು ಶುರುವಿಟ್ಟುಕೊಂಡಿದ್ದಾರೆ.

ಬ್ಯಾಂಕಿನ ಆಡಳಿತ ಮಂಡಳಿಗೆ ಹಿಂದೆ ನಿರ್ದೇಶಕರಾಗಿದ್ದವರು ಮರು ಆಯ್ಕೆಗೆ ಸಜ್ಜಾಗುತ್ತಿದ್ದಾರೆ. ಶಾಸಕರಾದ ರೂಪಕಲಾ, ಕೊತ್ತೂರು ಮಂಜುನಾಥ್​, ಎಸ್​.ಎನ್​.ಸುಬ್ಬಾರೆಡ್ಡಿ ಅವರು ಸ್ಪರ್ಧೆ ಮಾಡಲು ಸಿದ್ಧತೆಯಲ್ಲಿದ್ದಾರೆ. ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮಾಜಿ ಸಚಿವ ಶಿವಶಂಕರ್​ರೆಡ್ಡಿ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ. ಈಗಾಗಲೇ ಕೊತ್ತೂರು ಮಂಜುನಾಥ್​, ಟಿಎಪಿಎಂಎಸ್​ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಘೋಷಣೆ ಮಾಡಿದ್ದಾರೆ. ಮುಳಬಾಗಿಲು ತಾಲೂಕು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ದಿ.ನೀಲಕಂಠೇಗೌಡರ ಸಹೋದರ ಸರ್ವಜ್ಞಗೌಡ ಅವರನ್ನು ಕಾಂಗ್ರೆಸ್​ನಿಂದ ಕಣಕ್ಕೆ ಇಳಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಮತದಾರರ ಪಟ್ಟಿ ಪ್ರಕಟ

ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960ರ ನಿಯಮ 13(ಡಿ) ರೀತ್ಯ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾ ಸಹ ಚುನಾವಣಾ ಅಧಿಕಾರಿ ಪ್ರಕಟ ಮಾಡಿದ್ದಾರೆ. ಬ್ಯಾಂಕಿನ ಸಿಇಒ ಮಾ.28ರಂದು ಸಲ್ಲಿಸಿದ್ದ ಮತದಾರರ ಪಟ್ಟಿಯನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರಿಂದ ಪರಿಶೀಲನೆಗೆ ಒಳಪಡಿಸಿ ಏ.7ರಂದು ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಪಟ್ಟಂತೆ ಸದಸ್ಯರು, ಡೆಲಿಗೇಟ್​ಗಳ ಕರಡು ಪಟ್ಟಿ, ಸುಸ್ಥಿದಾರರ ಕರಡು ಪಟ್ಟಿ, ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಮೇ 5ವರೆಗೆ ಸ್ವೀಕೃತವಾದ ದೂರು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿ ಮೇ 12ರಂದು ಪ್ರಕಟಿಸಲಾಗಿದೆ. ಚುನಾವಣೆ ನಡೆಸುವಂತೆ ಮೇ 2 ರಂದು ಉಚ್ಚ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಚುನಾವಣೆ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ

ಚುನಾವಣಾ ಅಧಿಕಾರಿಯಾಗಿ ಕೋಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರನ್ನು ನಿಯೋಜಿಸಲಾಗಿದ್ದು, ಮೇ 18ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ, ಮೇ 21ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್​ ಪಡೆಯಲು ಮೇ 23ರವರೆಗೂ ಅವಕಾಶ ಕಲ್ಪಿಸಲಾಗಿದೆ. ಮೇ 28ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಮತದಾನ ಹಾಗೂ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ.

18 ನಿರ್ದೇಶಕ ಸ್ಥಾನಗಳ ವಿವರ

ಹೊಸದಾಗಿ ರಚನೆಯಾಗಿರುವ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳು ಸೇರಿ ಎರಡು ಜಿಲ್ಲೆಯ 14 ತಾಲೂಕುಗಳಿಂದ ತಲಾ ಒಬ್ಬೊಬ್ಬರಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಆಯ್ಕೆಯಾಗಲಿದ್ದಾರೆ. ಎರಡು ಜಿಲ್ಲೆಯ ಟಿಎಪಿಸಿಎಂಎಸ್​ಗಳಿಂದ ಒಬ್ಬರು ನಿರ್ದೇಶಕ, ಎರಡು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ತಲಾ ಒಬ್ಬೊಬ್ಬರು ನಿರ್ದೇಶಕರು ಹಾಗೂ ಎರಡು ಜಿಲ್ಲೆಯ ಇನ್ನೆತರೆ ಸಹಕಾರ ಸಂಘಗಳಿಂದ ಒಬ್ಬರು ನಿರ್ದೇಶಕ ಸೇರಿ ಒಟ್ಟು 18 ಮಂದಿ ಆಡಳಿತ ಮಂಡಳಿಗೆ ಅವಕಾಶ ಕಲ್ಪಿಸಲಾಗಿದೆ.

ರಂಗೇರಿದ ಕಣ

ಡಿಸಿಸಿ ಬ್ಯಾಂಕಿಗೆ ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಪ್ರಚಾರ ಶುರುವಾಗಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂದು ಬಿಜೆಪಿ, ಜೆಡಿಎಸ್​ ಮೈತ್ರಿಯಲ್ಲಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಕಾಂಗ್ರೆಸ್​ನ ಒಂದು ಗುಂಪು ಮಂಗಳವಾರ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್​ ಒಂದರಲ್ಲಿ ಸಭೆ ಸೇರಿತ್ತು. ಶಾಸಕ ಕೊತ್ತೂರು ಮಂಜುನಾಥ್​, ಎಂ.ಎಲ್​.ಸಿ.ಅನಿಲ್​ಕುಮಾರ್​, ಶಾಸಕ ನಂಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್​ ಅಹ್ಮದ್​, ಮಾಜಿ ಸ್ಪೀಕರ್​ ರಮೇಶ್​ಕುಮಾರ್​, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್​ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್​ ಶಾಸಕರು ಪಾಲ್ಗೊಂಡು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.