ಜಿಲ್ಲೆ

ಮಳೆಹಾನಿ ಪ್ರದೇಶಗಳಿಗೆ ಶಾಸಕರು ಮತ್ತು ಡಿಸಿ ಭೇಟಿ


ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕಡಮಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ಉಂಟಾಗಿರುವ ಮಳೆಹಾನಿ ಪ್ರದೇಶಗಳಿಗೆ ಮಡಿಕೇರಿ ಶಾಸಕರು ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.


ಕಡಮಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ಸತತ ಸುರಿಯುತ್ತಿರುವ ಮಳೆಯಿಂದಾಗಿ ೫ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಪರಿಹಾರ ವಿತರಿಸುವಂತೆ ಶಾಸಕರು ತಿಳಿಸಿದರು.


ವ್ಯಾಪಕ ಮಳೆಯಿಂದಾಗಿ ಕೃಷಿ ಬೆಳೆಗೆ ಹಾನಿಯಾಗಿದ್ದು, ಕೃಷಿ ಬೆಳೆ ಹಾನಿಗೆ ಪರಿಹಾರ ವಿತರಿಸಬೇಕು. ಸುಬ್ರಹ್ಮಣ್ಯ ಕಡಮಕಲ್ಲು ಮಾರ್ಗ ರಸ್ತೆ ಮತ್ತು ಸೇತುವೆ ಹಾನಿಯಾಗಿದೆ. ಇದನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆ ಎಂಜಿನಿಯರ್‌ಗಳು ಸರಿಪಡಿಸುವಂತೆ ಸೂಚಿಸಿದ ಅವರು, ಕಡಮಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ಆಗಬೇಕಿರುವ ಮೂಲ ಸೌಲಭ್ಯ ಸಂಬಂಧ ಗ್ರಾಮಸ್ಥರಿಂದ ಇದೇ ಸಂದರ್ಭದಲ್ಲಿ ಮಾಹಿತಿ ಪಡೆದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಇನ್ನೂ ಒಂದು ವಾರಗಳ ಕಾಲ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರ ವಹಿಸಬೇಕು. ಮನೆ ಹಾಗೂ ಬೆಳೆ ಹಾನಿ ಸಂಬಂಧ ಪರಿಹಾರ ವಿತರಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ. ಸದಸ್ಯರಾದ ಸುಭಾಷ್, ಪಿಡಿಒ ಶಶಿಕಿರಣ ಇತರರು ಇದ್ದರು.