ಹೊರ್ತಿ: ದೇಸಿ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಎಲ್ಲ ಕೆಲಸಗಳನ್ನು ಮಾಡುವುದು ಅವಶ್ಯ. ಇಂಡಿ, ಸಿಂದಗಿ, ಚಡಚಣ ತಾಲೂಕುಗಳ ಮಠಾಧೀಶರ ಉಪಸ್ಥಿತಿಯಲ್ಲಿ 2024-25ನೇ ಸಾಲಿನ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಆರಂಭಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಮೀಪದ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಮಠಾಧೀಶರು ಹಾಗೂ ಗಣ್ಯರ ನೇತೃತ್ವದಲ್ಲಿ ಚಾಲನೆ ನೀಡಿ ಅವರು ಬುಧವಾರ ಮಾತನಾಡಿದರು.
ಈ ಸಂಸ್ಥೆ ರೈತರ ಸಂಸ್ಥೆಯಾಗಿದ್ದು, ಲಾಭ- ನಷ್ಟ ನಿಮ್ಮದೆ ಆಗಿದೆ. 12 ತಿಂಗಳು ಬಲಿತ ಕಬ್ಬನ್ನು ಕಟಾವು ಮಾಡಿದರೆ ಒಳ್ಳೆಯ ಲಾಭದಾಯಕ ಉತ್ಪಾದನೆ, ಇಳುವರಿ ಸಾಧ್ಯ. ಇಲ್ಲವಾದಲ್ಲಿ ಸಂಸ್ಥೆ ಸಂಪೂರ್ಣ ನಷ್ಟವಾಗುತ್ತದೆ. ಸಂಸ್ಥೆಗೆ ಲಾಭವಾದಾಗ ಹೆಚ್ಚಿನ ರೀತಿಯಲ್ಲಿ ರೈತರಿಗೆ ಸಹಾಯ ಮಾಡಲು ಸಾಧ್ಯ. ನಾವು ಪ್ರತಿ ವರ್ಷ 55 ಕೋಟಿ ರೂ. ಖರ್ಚು ಮಾಡುವ ಜತೆಗೆ ಬ್ಯಾಂಕಗೆ ಹಣ ಕಟ್ಟಬೇಕಾಗುತ್ತದೆ ಎಂದರು.
ಇಲ್ಲಿಯವರೆಗೂ ನಾವು ಬ್ಯಾಂಕಿನ ವ್ಯವಹಾರ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಇನ್ನು ಮುಂದೆ ಕೂಡ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಸಂಸ್ಥೆಗೆ ಹಲವಾರು ಜನರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಸಹಾಯಕ್ಕೆ ನಾನು ಚಿರಋಣಿಯಾಗಿರುತ್ತೇನೆ. ನಾವು ಇಲ್ಲಿಯವರೆಗೆ ಎಫ್‌ಆರ್‌ಪಿ ನಿಗದಿಗಿಂತ ಹೆಚ್ಚಿನ ದರವನ್ನೇ ರೈತರ ಖಾತೆಗೆ ವರ್ಗಾಯಿಸುತ್ತ ಬಂದಿದ್ದೇವೆ. ಇನ್ನು ಮುಂದೆ ಕೂಡ ರೈತರಿಗೆ ಯೋಗ್ಯ ದರವನ್ನೇ ಕೊಡುತ್ತೇವೆ ಎಂದರು.
ಆಲಮೇಲದ ಗುರುಲಿಂಗ ಶಿವಾಚಾರ್ಯರು, ಹತ್ತಳ್ಳಿ- ಹಾವಿನಾಳ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಮಹಾಂತೇಶ ಹಿರೇಮಠ, ಎಸಿ ಅಬೀದ್ ಗದ್ಯಾಳ, ಝಳಕಿ ಠಾಣಾಧಿಕಾರಿ ಎಸ್.ಬಿ. ಪಾಟೀಲ, ಮಲ್ಲನಗೌಡ ಪಾಟೀಲ, ಜೆಟ್ಟಪ್ಪ ರವಳಿ, ಕೋರೆ ಸಾವಕಾರ, ಧನರಾಜ ಮುಜಗೊಂಡ, ಅಣ್ಣಾರಾಯ ಬಬಲಾದಿ, ನೀಲಕಂಠ ರೂಗಿ, ಸಣ್ಣಪ್ಪ ತಳವಾರ, ಬಿ.ಕೆ. ಪಾಟೀಲ ಹಾಗೂ 5 ತಾಲೂಕಿನ ರೈತರು, ಷೇರುದಾರರು ಉಪಸ್ಥಿತರಿದ್ದರು.