ಇಂಡಿ: ಹಡಪದ ಅಪ್ಪಣ್ಣ ಸಂಸ್ಥೆಯ ಮತ್ತು ಸಮಾಜದ ಋಣ ತೀರಿಸಬೇಕಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ನಾನು ಸ್ಪಂದಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಹಡಪದ ಅಪ್ಪಣ್ಣ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಶಿಕ್ಷಣ ಸಂಸ್ಥೆಯನ್ನು ಬಹಳ ಪರಿಶ್ರಮ ಹಾಕಿ ಕಟ್ಟಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನುಗ್ಗುತ್ತಿದ್ದೀರಿ. ಆಡಳಿತ ಮಂಡಳಿಯಲ್ಲಿ ಯಾವುದೇ ವೈಮನಸ್ಸು, ದ್ವೇಷಗಳು, ಸಣ್ಣಪುಟ್ಟ ಕಲಹಗಳು, ಇಲ್ಲದೆ ಇರುವದೇ ಈ ಸಂಸ್ಥೆ ಇಷ್ಟೊಂದು ದೊಡ್ಡ ಹೆಮ್ಮರವಾಗಿ ಬೆಳೆಯಲಿಕ್ಕೆ ಸಾಧ್ಯವಾಗುತ್ತಿದೆ. ನಿಮ್ಮ ಮೇಲೆ ಅಪ್ಪಣ್ಣನವರು, ಬಸವಣ್ಣನವರು, ಸಿದ್ಧೇಶ್ವರ ಶ್ರೀಗಳ ಆಶೀರ್ವಾದವಿದೆ. ಶಿಕ್ಷಕರೆಲ್ಲರೂ ಕೂಡಿಕೊಂಡು ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣವನ್ನು ನೀಡಿ ಎಂದರು.
ತಾಲೂಕಿನಲ್ಲಿರುವ ಸರ್ಕಾರಿ ವಸತಿ ನಿಲಯದಲ್ಲಿ ವಾಸವಿರುವ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿ/ನಿಯರಿಗೆ ಮಧ್ಯಾಹ್ನದ ಊಟವನ್ನು ಕಟ್ಟಿ ಕೊಡುತ್ತಿಲ್ಲ ಎಂಬ ವಿಷಯದ ಮನವಿಯನ್ನು ಈ ಸಂಸ್ಥೆಯ ಮುಖ್ಯೋಪಾಧ್ಯಾಯರು ಕೊಟ್ಟಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಕಟ್ಟಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಿದ್ದು ನಾವಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ್ ಮೋಮಿನ್, ಮಲ್ಲಣ್ಣ ಬಿರಾದಾರ, ಭೀಮಣ್ಣ ಕೌಲಗಿ, ಉಪಾಧ್ಯಕ್ಷೆ ಶಕುಂತಲಾ ನಾವಿ, ನಿರ್ದೇಶಕರಾದ ಧೂಳಪಣ್ಣ ನಾವಿ, ಸಂತೋಷ ಗೌಳಿ, ನಟರಾಜ ಗೌಳಿ, ಅಶೋಕ ಹಡಪದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದರಾಯ ಆಪ್ತಗಿರಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು. ಈರಣ್ಣ ರೋಗಿಯವರು ನಿರೂಪಿಸಿ, ವಂದಿಸಿದರು.