ಇಂಡಿ: ಗ್ಯಾರಂಟಿ ಯೋಜನೆಗಳು ನಿಜವಾದ ಬಡ-ನಿರ್ಗತಿಕರಿಗೆ ಮಾತ್ರ ಮುಟ್ಟುವಂತೆ ನೋಡಿಕೊಳ್ಳಬೇಕು. ಬಡವರಲ್ಲದವರ ಬಿಪಿಎಲ್ ಕಾರ್ಡ್‌ಗಳನ್ನು ತೆಗೆದು ಹಾಕಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಆತ್ಮಹತ್ಯೆ, ಜಾನುವಾರು ಮರಣ ಪ್ರಕರಣಗಳಿಗೆ 15 ದಿನದಲ್ಲಿ ಪರಿಹಾರ ನೀಡಬೇಕು. ಆರು ತಿಂಗಳು ಪರಿಹಾರ ನೀಡದಿದ್ದರೆ ಆ ಕುಟುಂಬದ ಪಾಡೇನಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ 71,876 ಮಹಿಳೆಯರು ಪ್ರತಿ ತಿಂಗಳು 2000 ರೂ. ಹಣ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಒಟ್ಟು 14 ಕೋಟಿ ರೂ. ವಿತರಣೆಯಾಗುತ್ತಿದ್ದು ಈವರೆಗೆ 11 ತಿಂಗಳಲ್ಲಿ 154 ಕೋಟಿ ರೂ. ವಿತರಣೆಯಾಗಿದೆ ಎಂದು ಸಿಡಿಪಿಒ ತಿಳಿಸಿದರು.
ವಿದ್ಯುತ್ ಇಲಾಖೆಯಿಂದ ಒಟ್ಟು 41 ಸಾವಿರ ಮನೆಗಳಲ್ಲಿ 39 ಸಾವಿರ ಮನೆಗಳಿಗೆ ಒಟ್ಟು 6 ಕೋಟಿ ರೂ. ಮೌಲ್ಯದ ವಿದ್ಯುತ್ ಉಚಿತ ಮತ್ತು ತಾಲೂಕಿನಲ್ಲಿ 61 ಸಾವಿರ ಜನರಿಗೆ ಅಕ್ಕಿಯ ಹಣ ಕುರಿತು ಪ್ರತಿಯೊಬ್ಬರಿಗೆ 170 ರೂ. ನಂತೆ 22 ಕೋಟಿ ರೂ. ಹಣ ನೀಡಲಾಗಿದೆ ಎಂದು ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅನೇಕ ಕಡೆ ಮಹಾರಾಷ್ಟ್ರಕ್ಕೆ ಹೋಗಲು ಉಚಿತ ಬಸ್ ವ್ಯವಸ್ಥೆ ನೀಡಿದ್ದು, ನಮ್ಮ ತಾಲೂಕಿನವರಿಗೂ ಸವಲತ್ತು ಕೊಡಲು ಸಾಧ್ಯವಾಗುತ್ತದಾ? ಎಂದು ಪ್ರಶ್ನಿಸುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಡ್ರೈನೇಜ್ ನೀರು ಬರುತ್ತಿದ್ದು ಪುರಸಭೆಯವರಿಗೆ ಸಾಕಷ್ಟು ಬಾರಿ ಈ ಕುರಿತು ಮನವಿ ಮಾಡಿದರೂ ಕಾಳಜಿ ತೋರಿಲ್ಲ ಎಂದು ಘಟಕ ವ್ಯವಸ್ಥಾಪಕ ಬಿರಾದಾರ ದೂರಿದರು.
ಕೆಡಿಪಿಗೆ ನೂತನವಾಗಿ ಆಯ್ಕೆಯಾದ ನಾಮನಿರ್ದೇಶಕ ಸದಸ್ಯರನ್ನು ಸನ್ಮಾನಿಸಲಾಯಿತು. ಎಸಿ ಅಬೀದ್ ಗದ್ಯಾಳ, ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಡಿ.ವೈ.ಎಸ್.ಪಿ ಜಗದೀಶ ಎಚ್.ಎಸ್, ತಾಪಂ ಇಒ ಬಾಬು ರಾಠೋಡ, ಭೀಮು ಕವಲಗಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಮಲ್ಲನಗೌಡ ಬಿರಾದಾರ ಮತ್ತಿತರರಿದ್ದರು.
ಅಧಿಕಾರಿಗಳಾದ ಆರ್.ಎಸ್. ರುದ್ರವಾಡಿ, ಮಹಾಂತೇಶ ಹಂಗರಗಿ, ಮಹಾದೇವಪ್ಪ ಏವೂರ, ಎಚ್.ಎಸ್. ಪಾಟೀಲ, ಅರಣ್ಯ ಇಲಾಖೆಯ ಎಸ್.ಜಿ. ಸಂಗಾಲಕ, ಮಂಜುನಾಥ ಧೂಳೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರೋಟೊಕಾಲ್ ಮಾಹಿತಿ ತರಿಸಿ
ಈಗಾಗಲೇ ಮುರಮ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೂಮಿಪೂಜೆ ನೆರವೇರಿಸಿದ್ದು, ಈಗ ಮತ್ತೆ ಅದೇ ರಾಷ್ಟ್ರೀಯ ಹೆದ್ದಾರಿಯ ಭೂಮಿಪೂಜೆಯನ್ನು ಮಾಡುವುದು ಎಷ್ಟು ಸರಿ? ಈಗ ಅವರು ಮಾಡಿದ ಕಾರ್ಯಕ್ರಮ ಪ್ರೋಟೊಕಾಲ್ ಪ್ರಕಾರ ಇದೆಯೋ? ಹೇಗಿದೆ? ಅದನ್ನು ಕೂಡಲೇ ಪತ್ರ ಬರೆದು ಮಾಹಿತಿ ಪಡೆಯಲು ಶಾಸಕ ಯಶವಂತರಾಯಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಗ್ರಾಮ ಸಾರಾಯಿ ಮುಕ್ತ ಮಾಡಿ ಇಂಡಿ ತಾಲೂಕಿನಲ್ಲಿ ಯಾವದಾದರೂ ಒಂದು ಗ್ರಾಮವನ್ನು ಸಾರಾಯಿ ಮುಕ್ತ ಮಾಡಿದರೆ, ಇತರ ಗ್ರಾಮಗಳಿಗೆ ಪ್ರೇರಣೆಯಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲರು ಸೂಚನೆ ನೀಡಿದರು. ಅದಕ್ಕೆ ಪೂರಕವಾಗಿ ಮಾತನಾಡಿದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು, ಸ್ಥಳೀಯ ಧರ್ಮಸ್ಥಳ ಸೇವಾ ಸಂಸ್ಥೆ ಮತ್ತು ಪೂಜ್ಯ ಅಮೃತಾನಂದ ಶ್ರೀಗಳ ಸಹಕಾರದಿಂದ ಯಾವುದಾದರೂ ಒಂದು ಗ್ರಾಮ ಗುರುತಿಸಿ ಬರುವ ಅಕ್ಟೋಬರ್ 2 ರಿಂದ ಸಾರಾಯಿ ಮುಕ್ತ ಗ್ರಾಮ ಮಾಡಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.